Tuesday, May 12, 2009

ವೈಎನ್ಕೆ ಏನಕ್ಕಂದ್ರೆ ನಗೋದಿಕ್ಕೆ!

ಬಾಕಿನ ಅವರನ್ನು ಕಾಡಿ ಬೇಡಿ, ಅವರ ಲಿಪಿ ಪ್ರಕಾಶನಕ್ಕೆ ಹತ್ತಾರು ಸಲ ಸುಳಿದಾಡಿ ವೈಎನ್ಕೆ ಅವರ "ಪದ್ಯ ಇಷ್ಟು ಲೈಟ್ ಆದ್ರೆ ಹೇಗೆ ಸ್ವಾಮಿ? [ಕವಿ ತೆಗಳು]" ಮತ್ತು "Wonder-ದೃಷ್ಟಿ" ಎಂಬ ಎರಡು ಪುಸ್ತಕಗಳನ್ನು ಪಡೆದು ಓದಿದೆ. ಬಾಕಿನ ಅವರು ಪುಸ್ತಕ ಕೊಡುವುದೊ ಬೇಡವೊ, ಕೊಟ್ಟರೆ ಹಿಂದಕ್ಕೆ ಬರುವುದೊ ಇಲ್ಲವೊ ಎಂಬ ಅನುಮಾನದಿಂದಲೇ ಕೊಟ್ಟಿದ್ದಾರೆ. ನಾನು ಮನಸ್ಸಿಲ್ಲದ ಮನಸ್ಸಿಂದ ಹಿಂದಿರುಗಿಸುತ್ತೇನೆ.

ಬಾಕಿನ ಅವರದು ಕನ್ನಡ ಸಾಹಿತ್ಯ ಲೋಕದಲ್ಲಿ ಸುಪರಿಚಿತ ಹೆಸರು. ಬಾಲಕೃಷ್ಣ ಕಿಳಿಂಗಾರು ನಡುಮನೆ ಸಂಕ್ಷಿಪ್ತಗೊಂಡು ಪ್ರೀತಿಯ ಬಾಕಿನವಾಗಿದೆ. ಇವರು ಇಪ್ಪತ್ತೆರೆಡು ವರ್ಷಗಳಿಂದ 'ಗಾಂಧೀ ಬಜಾರ್' ಪತ್ರಿಕೆಯನ್ನು ನಿರಾತಂಕವಾಗಿ ಪ್ರಕಟಿಸುತ್ತಾ ಬಂದಿದ್ದಾರೆ. 'ಗಾಂಧೀ ಬಜಾರ್' ಪತ್ರಿಕೆಗೆ ಬಹುಶಃ ಕನ್ನಡದ ಎಲ್ಲ ಲೇಖಕರು ಬರೆದಿದ್ದಾರೆ. ತಮ್ಮ ಕವಿತೆಗಳಿಂದ ಜನ ಸಾಮಾನ್ಯರನ್ನು ತಲುಪುವಲ್ಲಿ ಕನ್ನಡದ ಎಲ್ಲಾ ಕವಿಗಳಿಗಳಿಂತ ಮುಂದಿರುವ ಕೆ.ಎಸ.ನರಸಿಂಹ ಸ್ವಾಮಿಯವರ ಮತ್ತು ಒಂದು ಜನಾಂಗದ ಕಣ್ಣು ತೆರೆಸಿದ ಕವಿಯೆಂದು ಗುರುತಿಸಿಕೊಂಡ ನವ್ಯಕಾವ್ಯದ ಹರಿಕಾರ ಗೋಪಾಲಕೃಷ್ಣ ಅಡಿಗರ ಸಮಗ್ರ ಕಾವ್ಯವನ್ನು ಹೊರತಂದಿರುವುದು ಇವರ ಸಾಧನೆಗಳಲ್ಲೊಂದು. ಬಾಕಿನ ಅವರು ಇಷ್ಟೆಲ್ಲಾ ಸಾಹಿತ್ಯ ಸಂಬಂಧೀ ಕೆಲಸಗಳನ್ನು ಮಾಡಿರುವುದು ಕೇವಲ ಹಣಕ್ಕಾಗಿ ಅಲ್ಲ ಸಾಹಿತ್ಯದೆಡೆಗಿನ ಪ್ರೀತಿಯಿಂದಾಗಿ. ಇವರ ಕೆಲಸ ಕಾರ್ಯಗಳನ್ನು ನೋಡಿದಾಗ ಜಿ.ಬಿ. ಜೋಷಿಯವರ ಸಾಹಿತ್ಯ ಪರಿಚಾರಿಕೆ ಸ್ಮೃತಿ ಪಟಲದಲ್ಲಿ ಹಾದು ಹೋಗದೇ ಇರದು.

******

"ದುಡಿಯೋನು ಒಬ್ಬ ಕೂತು ತಿನ್ನೋರು ನಾಲ್ಕು ಜನ" ಎಂಬರ್ಥದ ಮಾತು ನಾನು ಚಿಕ್ಕವನಿದ್ದಾಗ ತುಂಬಾ ಪ್ರಚಲಿತದಲ್ಲಿತ್ತು. ಹಾಗೆ ನಮ್ಮ ಮನೇಲಿ ಇದ್ದದ್ದು ತಿನ್ನೋಕೆ ಏಳು ಜನ. ಹೀಗಾಗಿ ನಮ್ಮ ಮನೆಯಲ್ಲಿ ದಿನ ಪತ್ರಿಕೆ ತರಿಸುವುದು ಕನಸಿನ ಮಾತಾಗಿತ್ತು. ಅದು ಯಾರೋ ಶಾಲೆಗೆ ಹೋಗುವ ಮಕ್ಕಳು ಪೇಪರ್ ಓದಬೇಕು ಎಂದು ಹೇಳಿದರೋ ಗೊತ್ತಿಲ್ಲ ಅಂತೂ ನಮ್ಮ ಮನೆಗೊಂದು ದಿನ ಪತ್ರಿಕೆ ಹಾಕಿಸಿಕೊಳ್ಳುವುದು ಅಂತ ಆಯಿತು. ನಾವು ಅಪರೂಪಕ್ಕೆ ಐದೂ ಜನ ಮಕ್ಕಳು ಒಗ್ಗಟ್ಟು ಪ್ರದರ್ಶಿಸಿ "ಕನ್ನಡ ಪ್ರಭ" ದಿನ ಪತ್ರಿಕೆಯೆಂದು ನಿರ್ಧರಿಸಿದೆವು. ಕಾರಣ ಸ್ವಷ್ಟ: ಈಗ ಉದಯ ವಾಣಿಯಲ್ಲಿ ಬರುವಂತೆ ಆಗ ಕನ್ನಡ ಪ್ರಭದಲ್ಲಿ ಸಿನೆಮಾ ಸುದ್ಧಿ, ಚಿತ್ರಗಳು ಹೆಚ್ಚಾಗಿ ಬರುತ್ತಿತ್ತು. ನಾನು ಸುಮಾರು 2-3 ನೇ ತರಗಲಿಯಲ್ಲಿದ್ದಾಗಿಂದ ಈ ದಿನ ಪತ್ರಿಕೆ ಓದುತ್ತಿದ್ದೆ. ಓದುತ್ತಿದ್ದೆ ಎನ್ನುವುದಕ್ಕಿಂತ "ನೋಡುತ್ತಿದ್ದೆ" ಎಂಬ ಪದ ಇಲ್ಲಿ ಸೂಕ್ತ. ಪೇಪರ್ ಓದಲೆಂದೆ ನಾನು ರಂಗಣ್ಣನ ದೋಭಿ ಅಂಗಡಿಗೆ ಹೋಗುತ್ತಿದ್ದೆ. ಅಲ್ಲಿನ ವಿಶೇಷವೆಂದರೆ ಅಂಗಡಿಗೆ ಬರುತ್ತಿದ್ದ ಎಲ್ಲರಿಗು (ಗಿರಾಕಿಗಳನ್ನು ಹೊರತು ಪಡಿಸಿ) ರಂಗಣ್ಣ ಸಂಬೋಧಿಸುತ್ತಿದಿದ್ದು ಮತ್ತು ನಾವೆಲ್ಲರೂ ರಂಗಣ್ಣನ ಸಂಬೋಧಿಸುತ್ತಿದಿದ್ದು "ಯ್ಯೋ" ಎಂದು. ಹೀಗೆ ಶುರುವಾದ ಈ ಪತ್ರಿಕೆಯೊಂದಿಗೆ ಸಂಬಂಧ ನಮ್ಮ ಮನೆಗೆ ಹಾಕಿಸಿಕೊಳ್ಳುವಂತಾದಾಗ ನಾನು "ನೋಡುವುದರಿಂದ" "ಓದುವುದ" ಕಲಿತ್ತಿದ್ದೆ.

ನನಗೆ ನೆನಪಿರುವಂತೆ ಆಗ ವೈ.ಎನ್. ಕೃಷ್ಣಮೂರ್ತಿಯವರು ಸಂಪಾದಕರಾಗಿದ್ದರು. ಪ್ರತಿ ಗುರುವಾರ ಅವರು Wonder-ಕಣ್ಣು ಎಂಬ ಹೆಸರನಡಿ ಲೇಖನ ಬರೆಯುತ್ತಿದ್ದರು. ಅದರಲ್ಲಿ ಪ್ರಚಲಿತ ವಿದ್ಯಮಾನಗಳ ಬಗ್ಗೆ ವ್ಯಂಗ್ಯವಾಗಿ, ಕೆಲವೊಮ್ಮೆ ನಡೆದಿರುವ ಘಟನೆ, ಸಂಭಾಷಣೆಯನ್ನು ಇನ್ನೊಂದು ಕೋನದಿಂದ ನೋಡಿ, ಬರೆದು ಹಾಸ್ಯ ಉಕ್ಕುಸಿತ್ತಿದ್ದರು. ನಾನು ಅವರ ಪದಲೀಲೆ, punch, punಗಳ ಬಗ್ಗೆ ಹೇಳುವುದಕ್ಕಿಂತ ನೀವೇ ಕೆಳಗಿನ ಅವರ ಕೆಲವು ಕವಿತೆಗಳನ್ನು ಓದಿ have fun. Over to punಡಿತ್......

ಶಬರಿ
ಕಾದಿರುವಳು ಶಬರಿ
ಹಿಡಿದುಕೊಂಡು ಡಬರಿ
-- ಅದರಲಿಷ್ಟು ಕೊಬರಿ

ಕವಿತೆ
ಕವಿತೆ
ನೀನೇಕೆ
ಪದಗಳಲ್ಲಿ
ಅವಿತೆ?

ಕ್ರಾಂತಿಕಾರಿ
ಎಡಗೈಲಿ ಕುಡುಗೋಲು
ಬಲಗೈಲಿ ಸುತ್ತಿಗೆ.
ಮನೇಗ್ ಬೇಗ ಹೋಗದಿದ್ರೆ
ಬೈತಾಳೆ ಅತ್ತಿಗೆ!

ಇದು ಸು.ರಂ. ಏಕ್ಕುಂಡಿಯಲ್ಲಿರುವ ಕವಿಯೆಡಿಗಿನ ಪ್ರೀತಿ ಮತ್ತು ಮಾಧ್ವ-ಮಾಸ್ಕೋ ನಡುವಿನ ಆಯ್ಕೆಗೆ ವ್ಯಂಗ್ಯಭರಿತ ಕವಿತೆ.

ಚರ್ಮ-ಕರ್ಮ
ಸುಬ್ಬಣ್ಣ ರಂಗನಾಥ
ಕನ್ನಡದ ಕೀಟ್ಸ್
ಎಂದಾರೋ ಕರೆದೆದ್ದು ಕೇಳಿ
ಕುದಿದೆದ್ದರು
ಲೋಕಲ್ ಎಲಿಯಟ್
ಅಂಡ್ ಯೇಟ್ಸ್

ಸುಬ್ಬಣ್ಣನಿಗೆ ಬಂತು
ರಾಜ್ಯ ಪ್ರಶಸ್ತಿ
ಭೇಟಿಯಾದರು ಮಾಸ್ತಿ
ಹರಸಿದರು 'ಸ್ವಸ್ತಿ'
ಆದರೆ
ಮಾಧ್ವ-ಮಾಸ್ಕೋ
ನಡುವಿದ್ದ ಸುಬ್ಬಣ್ಣ
ಕಡೆಗೆ ತಲೆಬಾಗಿದ್ದು
ಕೈ ಅಲ್ಲ ತೋಳು
ಕೊಟ್ಟಿದ್ದು
ತಮ್ಮದೇ ಮಠದ
ಮುದ್ರಾಧಾರಣೆಗೆ ಮಾತ್ರ

ಬೆಂಕಿ ಕೊಡ್ಲದ
ಬೆಂಕಿ ಒಡಲಿಗೆ
ಬೆಂಕಿ ಕೊಡಲಾ
ಎಂದಿತ್ತು ಮುದ್ರೆ!
'ನೋಡಿ ಸ್ವಾಮಿ
ಭಸ್ಮವಾಯಿತು
ನನ್ನೆಲ್ಲ ಕರ್ಮ'-
ಸುಬ್ಬಣ್ಣ
ಎಂದಾಗ
ಘಾ
ನಿಜ ನುಡಿದಿದ್ದುಏನು ಗೊತ್ತೆ?
ಭಸ್ಮವಾಗಿದ್ದು ಕರ್ಮವಲ್ಲ,
ಸ್ವಾಮಿ,
ನಿಮ್ಮ ಚರ್ಮ'.
ಇದ ಕೇಳಿ
"ಇಂಥ ಪದ್ಯ
ಓದಬೇಕಾಯಿತೇ?
ಇದು ನಮ್ಮ ಕರ್ಮ!"
ಕ್ರಿಸ್ತಪೂರ್ವ ವರ್ಮ.

ಇದು YNK ಅವರ ಸುಪ್ರಸಿದ್ಧ ಕವಿತೆ.
ಬರ್ತ್ ಆಫ ಭರತ

ವಿಶ್ವಾಮಿತ್ರ ಮೇನಕೆ
ಡ್ಯಾನ್ಸ್ ನೋಡೋದು ಏನಕೆ?
(Ask ಮಿಸ್ಟರ್ ವೈಎನ್ ಕೆ?)

ಏನಕೆ? ಏನಕೆ?
ಕಾಳಿದಾಸನ ಪೇನಕೆ
ಚಾನ್ಸ್ ಕೊಡುವ ಕಾರ್ಯಕೆ!
ಋಷಿಕನ್ಯೆ ಕೌಮಾರ್ಯಕೆ
ಭಂಗತರುವ ಕ್ರೌರ್ಯಕೆ.


ದುಷ್ಯಂತನ ಬರವಿಗೆ
ಆ'ಮೇಲಿನ' ಮರೆವಿಗೆ
ಕಾದು ನಿಂತಳೆ ಕುಂತಳೆ?
ಚಡಿಪಡಿಸುತ ಕುಂತಳೆ?
ನಿಂತಳೆ?
ಕುಂತಳೆ?
ಶಕುಂತಳೆ?

ಇದು ಅವರ ಲೇಖನದಲ್ಲಿವೊಂದರಲ್ಲಿ ಓದಿದ್ದೆ.
Mary Rose
sat on a pin
Mary rose

ಪೌಡರು
ಶಂಕರಲಿಂಗೇಗೌಡರು
ಹಚ್ಕೊಂಡಿದ್ರು ಪೌಡರು

ವೈಎನ್ಕೆ ಪದಗಳನ್ನು ಮುರಿದು, ಹರಿದು, ಹುರಿದು ಹೊಸ ಅರ್ಥವನ್ನೂ ಅನರ್ಥವನ್ನೋ ಕೊಡುವ ಪದಗಳನ್ನು ಹುಟ್ಟಿಸುತ್ತಿದ್ದರು. ಕೆಳಗಿನದು ಅವರ ಲೇಖನದ ಒಂದು ಭಾಗ:

ಪದಗಳನ್ನು ಮುರಿದರೆ ಬಿಡಿಸಿದರೆ ಹೊಸ ಪದಗಳು ಸೃಷ್ಟಿಯಾಗುತ್ತವೆ. ಅರ್ಥ ಬೇರೆಯಾತ್ತೆ. ಹಿಂದೆ 'ಮೆಣಸು, ಜೀರಿಗೆ ಬೇಕೆಂದು ಪಟ್ಟಿಯಲ್ಲಿ ಬರೆದಾಗ ಅಕ್ಷರಗಳ ನಡುವೆ ಅಂತರ ಹೆಚ್ಚಾಗಿ ಅರ್ಥ ಬೇರೆಯಾಯಿತೆಂದು ಹಿಂದಿನಿಂದ ಕೇಳಿರಬಹುದು. 'ಮೆಣ ಸುಜಿ ರಿಗೆ' ಎಂದು ಬರೆದುದನ್ನು ನೋಡಿ 'ಮೆಣ' ಬಹುಶಃ ಮೇಣ ಇದ್ದೀತು. 'ಸುಜಿ' ಬಹುಶಃ ಸೂಜಿ ಇದ್ದೀತೆಂದು ಅರ್ಥಮಾಡಿಕೊಂಡರೂ 'ರಿಗೆ' ಎಂದರೇನು? ಕಸಬರಿಗೆ ಇರಬೇಕೆಂದು ಇವು ಮೂರನ್ನು ತಂದರೆಂದು ಹಳೆಯ ಕಥೆ. (ವೈಎನ್ಕೆ ಅವರು 'ಬರಲಿದೆ ಬರಲಿದೆ' ಎಂಬ ಹೆಸರಿನ ಪುಸ್ತಕವೊಂದನ್ನು ಬರೆದಿದ್ದಾರೆ. ಇಲ್ಲಿ ಬರಲು ಎಂದರೆ ಕಸಬರಿಗೆ)


ಇದೆ ಜಾತಿಯದೆಂದರೆ ಶಹಜಹಾನನ ಪುತ್ರರಾದ ದಾರಾ, ಷುಜಿ, ಮುರಾದ್. ಔರಂಗಜೇಬ್ ಬಗ್ಗೆ ದಾರಾ ಸೂಜಿ ಮುರಿದ್ ಅವರ ಅಂಗೀ ಜೇಬಲ್ಲಿ ಹಾಕು ಎಂದು ಹೇಳುತ್ತಿದ್ದರು. 'ಕವಿತೆಗಳು' ಪದ ಮುರಿದಾಗ 'ಕವಿ' ತೆಗಳು ಎಂದು ಕವಿವರ್ಯರ ಲೇವಡಿಗೆ ಸಾರ್ಥಕ ಹೆಸರಾಯಿತು. ಇಂಗ್ಲೀಷಿನಲ್ಲಿ 'THERAPIST' - ಥೆರಪಿಸ್ಟ್ - ಚಿಕಿತ್ಸಕ - ಪದ ಮುರಿದಾಗ 'THE RAPIST' - ಅತ್ಯಾಚಾರ ಮಾಡುವವನು ಎಂದಾಗಿ


THERAPIST
When broken
Becomes
THE RAPIST


- ಎಂಬ 'ಲೈಟ್' ಕವನಕ್ಕೆ ಕಾರಣವಾಗಿದೆ.

ಇದೀಗ ಲೋಕಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಕಾಂಗ್ರೆಸ್ ನೇತೃತ್ವದ UPA ಮುನ್ನಡೆ ಸಾಧಿಸಿದೆ. ಈ ಸಮಯದಲ್ಲಿ Why.ಎನ್.ಕೆ ಅವರ ಈ ಜೋಕು ನೆನಪಿಗೆ ಬಂತು. cons ಪದಕ್ಕೆ pros ವಿರುದ್ಧ. ಹಾಗೆಯೇ progressಗೆ congress.
YNK YN Krishnamurthy bakina lipi

1 comment:

sritri said...

ವೈಎನ್ಕೆ ಅವರ ಪುಸ್ತಕಗಳ ಬಗ್ಗೆ ಓದಿ, ಅವುಗಳನ್ನು ಓದಬೇಕೆನಿಸುತ್ತಿದೆ.

"ನನ್ನ ಬಗ್ಗೆ ಹೇಳುವೆ ಗೊತ್ತಾದ ಮೇಲೆ..."

- ನಿಮಗೆ ಗೊತ್ತಾಗಿ, ನೀವು ನಮಗೆ ಹೇಳುವವರೆಗೆ ಕಾಯುವ ಸಹನೆ ನಮಗಿರಲಿ :)