Tuesday, May 26, 2009

ನೀಲು ಕುರಿತು ಎರಡು ಸಾಲು

"ನೀಲು" ಕೈಗೆತ್ತಿಕೊಂಡರೆ ಸಾಕು ಕಡೆವರೆಗೂ ಓದಿಸಿಕೊಂಡು ಹೋಗದೆ ಬಿಡದು. ಓದಾದ ಮೇಲಾಗುವ ಅನುಭವ ಅನಿರ್ವಚನೀಯ. ಲಂಕೇಶರು ತಮ್ಮ ಪತ್ರಿಕೆಯಲ್ಲಿ ನೀಲು ಎಂಬ ಹೆಸರಿನಿಂದ ಮೂರು, ನಾಲ್ಕು, ಐದೋ, ಆರೋ ಸಾಲುಗಳಲ್ಲಿ ಸಾಧ್ಯವಾದಷ್ಟು ಕಡಿಮೆ ಪದ ಬಳಸಿ ಚಿಕ್ಕ ಚಿಕ್ಕ ಕವಿತೆಗಳನ್ನು ಬರೆಯುತ್ತಿದ್ದರು. ಈ ಸಣ್ಣ ಕವಿತೆಗಳ ತಾಕತ್ತು ಮಾತ್ರ ಅಗಾಧ. ಇವು ಜಪಾನಿ ಹಾಯ್ಕುಗಳನ್ತಿವೆ. ಪ್ರತಿವಾರವೂ ತಪ್ಪದಂತೆ ಸುಮಾರು 20 ವರ್ಷಗಳ ಕಾಲ ಪತ್ರಿಕೆಯ ಯಾವುದೋ ಪುಟದ ಮಧ್ಯದಲ್ಲೋ ಕೊನೆಯಲ್ಲೋ ಒಂದು ಸರಳ ರೇಖಾ ಚಿತ್ರದೊಂದಿಗೆ ಬರೆದು ಪ್ರಕಟಿಸುತ್ತಿದ್ದರು. ಮತ್ತು ನೀಲು ಯಾರೆಂಬುದನ್ನು ತಿಳಿಸದೆ ನಿಗೂಢವಾಗಿಟ್ಟಿದ್ದರು. ನೀಲುವಿನ ಎಲ್ಲ ಕವಿತೆಗಳನ್ನು ಒಟ್ಟು ಮಾಡಿ ಈಗ ಪುಸ್ತಕ ಮಾಡಿದ್ದಾರೆ. ಅದೂ ಒಂದಲ್ಲ ಎರಡು. ಸಿಕ್ಕರೆ ಬಿಡಬೇಡಿ, ಸಿಗದಿದ್ದರೂ ಪಡೆದು ಓದಿ "ನೀಲು".

ಸುತ್ತಣದ ಚಿತ್ರಣ, ಮನುಷ್ಯನ ದೌರ್ಬಲ್ಯ, ವಾಂಛೆ, ಸುಖ, ಸಂಭ್ರಮ, ಹೀಗೆ ಇಷ್ಟೇ ಎಂದು ಹೇಳಿ ಮುಗಿಸಲಾರದಷ್ಟು ವಿಚಾರ ವೈವಿಧ್ಯತೆ ಈ ನೀಲುವಿನಲ್ಲಿದೆ. ಅದರಲ್ಲೂ ಪಾಕಡ ಮಸಸ್ಸಿನ ಎಲ್ಲ ಬಣ್ಣಗಳನ್ನು ಬಿಡಿಸಿರುವ ರೀತಿ ಬೆರೆಗು ಹುಟ್ಟಿಸುವದರೊಂದಿಗೆ ಕನ್ನಡಿ ಹಿಡಿದು ನಮ್ಮದೆ ಚಿತ್ರ ತೋರಿಸುತ್ತದೆ. ಕೆಲವು ಕಡೆ ಅರಗಿಸಿಕೊಳ್ಳಲೂ ಕಡೇಪಕ್ಷ ಓದಿ ಸಹಿಸಿಕೊಳ್ಳಲೂ ಕಷ್ಟವಾಗುವ ಜೀವನದ ಸತ್ಯವನ್ನು ಹೊರಗೆಡಹಿದ್ದಾರೆ. ಪ್ರೀತಿ, ಪ್ರೇಮ, ಹೆಣ್ಣಿನ ಬಣ್ಣನೆಗೆ ನಿಂತಾಗ ಅಗ್ದಿ ಹದಿ ಹರೆಯದವರೇ ಆಗಿದ್ದಾರೆ.
ತರುಣಿಯ ಬೆರಳು
ಮಾವಿನ
ಚಿಗುರಿನಂತೆ
ಮೋಹಕ

ಏಕಾಂತದಲ್ಲಿ ಓದುತ್ತಿದ್ದರೂ ಜೋರಾಗಿ ಗಹಗಹಿಸಿ ನಗುವಂತೆ ಮಾಡುತ್ತದೆ ಕೆಲವಡೆ.
ಸುಂದರ ಮನೆ ಕಟ್ಟಿಸಿ ಅಲಂಕರಿಸಿ
ಮೆಚ್ಚಿ ತಲೆದೂಗಿದ ನಮ್ಮ ವಿಮರ್ಶಕರು
ಮನೆಯ ಅಂದ ಕೆಡಿಸದಿರಲು
ರೋಡಿನಲ್ಲಿ ವಾಸಿಸತೊಡಗಿದರು

ಇದರಲ್ಲಿ ಲಂಕೇಶರ ಪ್ರಮುಖ ವಿಮರ್ಶಾತ್ಮಕ ಗುಣ ಕಾಣಿಸದೆ ಇರಲು ಸಾಧ್ಯವೇ ಇಲ್ಲ. ಹೀಗಾಗಿ "ಟೀಕೆ-ಟಿಪ್ಪಣಿ" ಇದೆ. ಕೃಷ್ಣ ಆಲನಹಳ್ಳಿಯ ಅಕಾಲದ ಅಗಲುವಿಕೆ, ಪಿ.ಟಿ. ಉಷಾಳ ಕಣ್ಣೀರು, ಬೆವರು, ಗಾಂಧೀಜಿಯ ಮಹಾತ್ಮೆ, ಮಾಸ್ತಿಯವರಿಗೆ ಬಂದ ಜ್ಞಾನಪೀಠದ ಸಂಭ್ರಮ, ಬಿ.ವಿ. ಕಾರಂತರ ಜೀವನದ ದುರ್ಘಟನೆ ಎಲ್ಲ ಕಾಣಿಸಿಕೊಂಡಿದೆ.

ನೀಲುವಿನ ನೇರಾನೇರ ಸರಳ ರಚನೆಗಳಿಗೆ ಕಲಾವಿದ ಹಾದಿಮನಿಯವರ ಕವಿತೆಯ ಗುಣದಂತೆ ಯಾವುದೇ ಮುಚ್ಚು ಮರೆಯಿಲ್ಲದ ನೇರಾನೇರ ಸರಳ ರೇಖಾ ಚಿತ್ರಗಳಿವೆ. ಅದ್ಭುತವಾಗಿವೆ.


ಮುದ ನೀಡುವ ನೀಲುವಿನ ಕೆಲವು ರಚನೆಗಳು:
ಎಲಿಜಬೆತ್ ಟೇಲರ್
ಎಂಟನೆಯ ಗಂಡನ ಮೂಲಕ
ಇತಿಹಾಸ ನಿರ್ಮಿಸುವಾಗ
ತನ್ನಂಥವರಿಂದ ಇತಿಹಾಸ
ಹೌಸ್ ಫುಲ್ ಆಗಿರುವುದನ್ನು
ಮರೆಯಬಾರದು

ಎಷ್ಟು ವಿಚಿತ್ರ ಅಲ್ಲವಾ,
ಪ್ರಪಂಚವನ್ನೇ ಸುತ್ತಿದ
ಖ್ಯಾತ ನಾವಿಕ ಸಿಂದಬಾದ್
ಹೆಂಡತಿಯ ಸ್ತನದ ಹತ್ತಿರದ
ಸುಂದರ ಮಚ್ಚೆಯನ್ನು
ಇಳಿವಯಸ್ಸಿನಲ್ಲಿ ಗಮನಿಸಿ
ತನ್ನ ಪ್ರವಾಸಗಳ ಬಗ್ಗೆ
ನಾಚಿಕೊಂಡನಂತೆ....

ಹೂಗಳುಭಟ್ಟರು
ಅಪಾಯವಾದರೂ
ಹೊಗಳಿಕೆಯ ನುಡಿ
ಹೃದಯಕ್ಕೆ
ಸಂಜೀವಿನಿಯಂತೆ

ಶ್ರೀನಿವಾಸಶೆಟ್ಟಿ ಎಂಬ ತರುಣ ಗಂಡ
ಚೊಚ್ಚಲು ಕವನ ಬರೆದು ತರುಣ ಹೆಂಡತಿಗೆ ತೋರಿದಾಗ
ಆ ಶೆಟ್ಟರ ಹೆಣ್ಣುಮಗಳು, "ಎಷ್ಟು ಸವರನ್ನು ಬರುತ್ತೆ?"
ಎಂದು ಕೇಳಿ ಅವನ ಕಾವ್ಯಾಕಾಂಕ್ಷೆಗೆ ಬೆಂಕಿ ಹಚ್ಚಿದಳು

"ಮುಟ್ಟಬೇಡ" ಎಂದು ಮುನಿದವಳು
ಅವನು ಮುಟ್ಟದೆ ಹೋದದ್ದಕ್ಕೆ
ಬಿಕ್ಕಿಬಿಕ್ಕಿ ಅತ್ತು
ಮೊನ್ನೆ ಸತ್ತಳು

ಯಾರೂ ಸರಿಯಾಗಿ ನೋಡಿ
ಕೂಡ ಇರದ ದೇವರಿಗಾಗಿ
ಮುಟ್ಟಬಲ್ಲ, ಪ್ರೀತಿಸಬಲ್ಲ
ಜೀವವ ಬಲಿಕೊಡುವವ
ಶತಮೂರ್ಖ

ಕೆಟ್ಟ ಕವಿಯ ಸಾಲುಗಳಲ್ಲಿ
ನದಿ
ಭೂಪಟದಲ್ಲಿ ಹರಿದಂತೆ
ಹರಿಯುವುದು

ಖ್ಯಾತಿ ಮತ್ತು ಐಶ್ವರ್ಯದ
ಬೆನ್ನು ಹತ್ತಿದ ಮನುಷ್ಯ
ತನ್ನ ಮನೆಯ ಬೆಕ್ಕಿಗೆ
ಹಾಲಿಡುವುದ ಮರೆಯುತ್ತಾನೆ

ಮೋಹಕ ಅಮೃತಶಿಲೆ
ಬಚ್ಚಲಲ್ಲಿ
ಸಿರಿವಂತನನ್ನು
ಜಾರಿಸಿ
ಸಣ್ಣ ಪಾಠ ಕಲಿಸುತ್ತದೆ

Neelu P Lankesh



2 comments:

Guruprasad said...

ಬಸವರಾಜ್
ಕವನ ಚೆನ್ನಾಗಿ ಇದೆ .. ನೀಲು ಅನ್ನೋದು ಏನು ?

ಬಸವರಾಜು said...

ನೀಲು ಎಂಬ ಹೆಸರಿನಿಂದ ಲಂಕೇಶ್ ತಮ್ಮ ಪತ್ರಿಕೆಯಲ್ಲಿ ಕವಿತೆಗಳನ್ನು ಬರೆಯುತ್ತಿದ್ದರು. ಇದೊಂದು ಕಾಲ್ಪನಿಕ ಹೆಸರು. ಇಲ್ಲಿ ಪ್ರಕಟವಾಗಿರುವುದೆಲ್ಲ ಲಂಕೇಶರ ಕವಿತೆಗಳು.