Sunday, March 15, 2009

ಹರಾಜು! ಹರಾಜು!!

ಮೊದಲನೆಯದಾಗಿ ಅಮೆರಿಕಾದಲ್ಲಿ ನಮ್ಮ ರಾಷ್ಟ್ರಪಿತನ ಪರಿಕರಗಳ ಹರಾಜು, ಎರಡನೆಯದಾಗಿ ಬಾಪುವಿನ ವಿರೋಧಾಭಾಸದಂತಿರುವ ವ್ಯಕ್ತಿಯಿಂದ ಅವುಗಳ ಖರೀದಿ, ಮತ್ತು ನಮ್ಮ ಘನ ಸರ್ಕಾರದ ನಿಶ್ಯಕ್ತಿ ಮತ್ತು ಗಾಂಧೀಯೆಡೆಗಿನ ಖೊಟ್ಟಿ ಗೌರವದ ಬಯಲು. ಇಷ್ಟೂ ಘಟನೆಗಳು ಕಳೆದ ಕೆಲ ದಿನಗಳಿಂದ ನನ್ನ ಮನಸ್ಸಿನ ನೆಮ್ಮದಿಯನ್ನು ಹಾಳು ಮಾಡಿದವು.

ಅಮೆರಿಕಾದ ನ್ಯೂಯಾರ್ಕ್ ನಗರದಲ್ಲಿ ಇದೇ ಮಾರ್ಚ್ ನಾಲ್ಕು ಮತ್ತು ಐದರಂದು ಗಾಂಧೀಜಿಯವರ ದೇಹದ ಒಂದು ಭಾಗವೇ ಆಗಿದ್ದ ಅವರ ಕನ್ನಡಕ, ಸೊಂಟಕ್ಕೆ ನೇತು ಹಾಕಿಕೊಳ್ಳುತ್ತಿದ್ದ ಗಡಿಯಾರ, ಚಪ್ಪಲಿ, ತಟ್ಟೆ ಮತ್ತು ಬಟ್ಟಲನ್ನು ಹರಾಜಿಗಿಟ್ಟಿದ್ದವನು ಜೇಮ್ಸ್ ಓಟಿಸ್ ಹೆಸರಿನ ಸಂಗ್ರಹಕಾರ. ಓಟಿಸ್ ಒಬ್ಬ ಸ್ವಯಮ್-ಘೋಷಿತ ಗಾಂಧೀವಾದಿ. ಇವು ಸುಮಾರು ಒಂಭತ್ತು ಕೋಟಿಗೆ ಹರಾಜಾಗಿದೆ. ಈತ ಹೇಳುವ ಪ್ರಕಾರ ಬರುವ ಹಣದ ಪ್ರತಿಯೊಂದು ರೂಪಾಯಿಯನ್ನು ಭಾರತದಲ್ಲಿರುವ ನಿರ್ಗತಿಕರ ಏಳಿಗಾಗಿ ಉಪಯೋಗಿಸುತ್ತಾನಂತೆ. ಇವನ ಹರಾಜಿನ ಹಿಂದಿನ ಉದ್ದೇಶ ಒಳ್ಳೆಯದಂತೆ ಕಂಡರೂ ಅದಕ್ಕೆ ಆಯ್ಕೆ ಮಾಡಿಕೊಂಡಿರುವ ದಾರಿ ಮಾತ್ರ ಅಸಮರ್ಥನೀಯ.


ಸರ್ಕಾರ ಈಗ ಅರೆನಿದ್ರೆಯಿಂದೆದ್ದು ದಡಬಡಾಯಿಸುವಂತೆ ಹರಾಜಿನಲ್ಲಿರುವ ಗಾಂಧೀಜಿಯವರ ಪರಿಕರಗಳನ್ನು ಪಡೆದೇ ತೀರುತ್ತೇವೆ ಎಂದಿತು. ನನಗೆ ಪ್ರಧಾನ ಮಂತ್ರಿಯವರು ಅವುಗಳನ್ನು ಎಷ್ಟೇ ಬೆಲೆ ತೆತ್ತಾದರು ಭಾರತಕ್ಕೆ ಹಿಂಪಡೆಯಲು ಪೂರ್ಣ ಅಧಿಕಾರ ಕೊಟ್ಟಿದ್ದಾರೆಂದು ಮೀಡಿಯಾಗೆ ಕೇಂದ್ರ ಮಂತ್ರಿ ಅಂಬಿಕ ಸೋನಿ ಕೊಟ್ಟ ಹೇಳಿಕೆ ಹೇಳಿಕೆ ಮಾತ್ರವಾಯಿತು. ಸದ್ದಿಲ್ಲದೆ ಹರಾಜಿನಲ್ಲಿ ಐದೂ ಪರಿಕರಕಗಳನ್ನು ಖರೀದಿಸಿ ವಿಜಯ ಮಲ್ಯ ತನ್ನದಾಗಿಸಿಕೊಂಡಾಗ ಸರ್ಕಾರದ ಮಾನ ಹರಾಜಾಯಿತು(ಸೋಲೊಪ್ಪಿಕೊಳ್ಳದ ಸರ್ಕಾರ ಪ್ರಹಸನ ಮುಂದುವರೆಸಿತು, ಅದಿರಲಿ). ಇಷ್ಟು ದೊಡ್ಡ ಸರ್ಕಾರಕ್ಕೆ ಗಾಂಧೀಜಿ ಬಳಸಿದ ಅಮೂಲ್ಯ ವಸ್ತುಗಳನ್ನು ಪಡೆಯಲು ವಿಫಲವಾದದ್ದು ನಾಚಿಕೆಗೇಡು. ಎಲ್ಲಕ್ಕಿಂತ ಹೆಚ್ಚಾಗಿ ಹರಾಜಿಗಿಂತ ಮುಂಚೆ ಅವುಗಳನ್ನು ಪಡೆದೇ ತೀರುತ್ತೆವೆಂದು ಸಾರಿ ಸಾರಿ ಹೇಳಿಕೊಂಡು ಕೂಡ ಸೋತಿದ್ದು ಸರ್ಕಾರ ತನ್ನ ನಿಶ್ಯಕ್ತಿಯನ್ನು ತಾನೇ ಬಯಲು ಮಾಡಿಕೊಂಡ೦ತಾಯಿತು.

ಹರಾಜಿನಲ್ಲಿ ಆ ವಸ್ತುಗಳನ್ನು ಪಡೆದ ವ್ಯಕ್ತಿಯನ್ನು ನೋಡಿದರೆ ಸಂಭ್ರಮಿಸುವಂತೆಯೂ ಇಲ್ಲ. ಇದನ್ನು ಪಡೆದದ್ದು ಹಣದ ಹೊರತಾಗಿ ಮತ್ತ್ಯಾವ ಅರ್ಹತೆಯಿರದ ವಿಜಯ ಮಲ್ಯ. ಮಲ್ಯ ಮತ್ತು ಗಾಂಧೀಜಿಯವರ ವ್ಯಕ್ತಿತ್ವಗಳನ್ನು ಪರಸ್ಪರ ಹೋಲಿಸಿದಾಗ ಊಹಿಸಲಾಗದ ಅಂತರದಲ್ಲಿ ಸ್ಥಾನ ಪಡೆಯುತ್ತಾರೆ. ತಮ್ಮ ಜೀವನದುದ್ದಕ್ಕೂ ಪಾನ ನಿರೋಧವನ್ನು ಪ್ರತಿಪಾದಿಸುತ್ತ, ಸರಳತೆಯೇ ಮೈವೆತ್ತಂತ್ತಿದ್ದ ಎಲ್ಲಿಯ ಗಾಂಧೀ ಮತ್ತು ಮೋಜು, ಮಾನಿನಿ, ಮದಿರೆಯ ಸರದಾರ ವಿಜಯ ಮಲ್ಯ ಎಲ್ಲಿ. ಇಂಥ ಮಲ್ಯ ತನ್ನ ಕೇವಲ ಹಣ ಹಣ ಬಲದಿಂದ ಗಾಂಧೀಜಿಯವರ ಅಮೂಲ್ಯ ವಸ್ತುಗಳನ್ನು ದಕ್ಕಿಸಿಕೊಂಡದ್ದು ಮಾತ್ರ ವಿರೋಧಾಭಾಸ. ಗಾಂಧೀಜಿಯವರ ಆದರ್ಶ, ನೀತಿಗಳು ಅಬ್ಬಬ್ಬಾಯೆಂದರೆ ಈತನ ಭಾಷಣದ(ಅದೂ ನಿಗಧಿತ ಜಾಗ/ಸಮಯದಲ್ಲಿ) ವಸ್ತುವಾಗಿರಬಹುದು ಅಷ್ಟೆ! ನನಗೆ ಇವರಿಬ್ಬರನ್ನು ಸಮೀಕರಿಸಲು ಯೋಚಿಸಿದರೆ ಮಲ ನಿರ್ಮಲ ವಿರುದ್ಧ ಪದಗಳೇ ನೆನಪಾಗುತ್ತದೆ.

ಸಂಗ್ರಹಾಕಾರ ಜೇಮ್ಸ್ ಓಟಿಸ್ ಬಳಿ ಇಷ್ಟೇ ಅಲ್ಲದೆ ಗಾಂಧೀಜಿಗೆ ಸೇರಿದ ಇನ್ನು ಕೆಲವು ಅಪರೂಪ ವಸ್ತುಗಳು ಇವೆಯಂತೆ. ಇವುಗಳನ್ನು ಅಭಾ ಗಾಂಧೀ( ಗಾಂಧೀ ಕುಟುಂಬಕ್ಕೆ ದತ್ತುವಾಗಿ ಹೋದಾಕೆ), ಜುನಾ ಗಡದ ನವಾಬ, ಒಬ್ಬ ಬ್ರಿಟಿಷ್ ಸೈನ್ಯಾಧಿಕಾರಿ ಮುಂತಾದವರು ಹಣದಾಸೆಗೆ ಮಾರಿಕೊಂಡಿದ್ದಾರೆ. ಇನ್ನೊಂದು ಖೇದವೆಂದರೆ ಜರ್ಮನಿಯ ಪೀಟರ್ ರೂಹೆ ಎಂಬ ಮತ್ತೊಬ್ಬ ಸ್ವಯಮ್-ಘೋಷಿತ ಗಾಂಧೀವಾದಿ ಫೋಟೋ, ಧ್ವನಿ ಮುದ್ರಣ, ವಿಡೀಯೋಗಳನ್ನೂ ಸಂಗ್ರಹಿಸಿ ಮಾರುವುದೇ ದಂಧೆ ಮಾಡಿಕೊಂಡಿದ್ದಾನೆ. ತನ್ನ ವೆಬ್ ಸೈಟ್ ಮೂಲಕ ಮಾರಾಟ ಮಾಡುವು ಈತ ಹಣ ಲೂಟಿ ಮಾಡುತ್ತಿದ್ದಾನೆ. ನಾವು ಕೈಕಟ್ಟಿಕೊಂಡು ಕುಳಿತು ನೋಡುವಂತಾಗಿದೆ.

ನನಗನಿಸುವಂತೆ ಈ ಹರಾಜು ಎಂಬುದೇ ಒಂದು ಅನಾರೋಗ್ಯಕಾರಿ ಪ್ರಕ್ರಿಯೆ. ಹರಾಜು ಮನಷ್ಯ ಮನುಷ್ಯನ ನಡುವಿನ ಸ್ವಾರ್ಥ, ಒಣ ಪ್ರತಿಷ್ಠೆ, ಹಣ ಬಲ ಪ್ರದರ್ಶನಕ್ಕೆ ಎಡೆ ಮಾಡಿಕೊಡುತ್ತದೆ. ಹರಾಜಿನಲ್ಲಿ ಭಾಗವಹಿಸುವವನಿಗೆ ಪ್ರಾಮಾಣಿಕವಾದ ಆದರ್ಶ, ಅಭಿಮಾನ, ಕಾಳಜಿ ಮಾತ್ರವಿದ್ದರೆ ಕೆಲಸಕ್ಕೆ ಬಾರದು. ಅಲ್ಲೇನಿದ್ದರೂ ದುಡ್ಡೇ ದೊಡ್ಡಪ್ಪ. ದುಡ್ಡಿದ್ದವನಿಗೆ ಮಾತ್ರ ಜಯ. ಯಾವುದನ್ನು ಹಣ, ಹಣ ಮಾತ್ರದಿಂದಲೇ ಅಳೆಯುವುದು ಹರಾಜಿನ ಪ್ರಮುಖ ನಿಯಮ. ಹಣವೊಂದುಳಿದು ಇನ್ನೆಲ್ಲೆವೂ ಅಲ್ಲಿ ಗೌಣ.

ಸತ್ಯ, ಅಹಿಂಸೆ, ಸ್ವಾವಲಂಬನೆಯನ್ನು ನಂಬಿ ಮತ್ತು ಅವನ್ನೇ ಜೀವನದುದ್ದಕ್ಕೂ ಪಾಲಿಸುತ್ತಾ ಅದರಲ್ಲೇ ಸಾಫಲ್ಯತೆಯನ್ನು ಕಂಡು ವಿಶ್ವಕ್ಕೆ ಮಾದರಿಯಾದ ಗಾಂಧೀಜಿಯವರ ಪರಿಕರಗಳನ್ನು ಹರಾಜಿಗಿಟ್ಟಿರುವುದೆ ಒಂದು ವಿಪರ್ಯಾಸ. ಈ ರೀತಿಯ ಹರಾಜು ನಮ್ಮ ಲಜ್ಜೆಗೆಟ್ಟ ಕ್ರಿಕೆಟ್ಟಿಗರಿಗೆ ಮಾತ್ರ ಇರಲಿ. ಹೆಚ್ಚು ಹಣ ಕೊಟ್ಟವರಿಗೆ ಆಡುವುದು ಅವರಿಗೆ ಅಭ್ಯಾಸ. ಇದು ಅವರಿಗೆ ತಗಲಿಕೊಂಡಿರುವ ಅತ್ಯಂತ ಕೆಟ್ಟ ಚಾಳಿ. ಗಾಂಧೀಜಿಯವರು ಬಳಸುತ್ತಿದ್ದ ಕನ್ನಡಕ, ಗಡಿಯಾರ, ಚಪ್ಪಲಿ, ತಟ್ಟೆ ಮತ್ತು ಬಟ್ಟಲು ಇಂದು ಕಲಾಕೃತಿಗಳಂತೆ ಕಾಣುತ್ತಿವೆ. ಎಂದೂ ಸಂಗ್ರಹ ಯೋಗ್ಯವಾದ ಗಾಂಧೀಜಿವರಿಗೆ ಸೇರಿದ ಪ್ರತೀ ಆಸ್ತಿಯು(?) ಯಾವುದೇ ಒಬ್ಬ ವ್ಯಕ್ತಿಗೆ ಸೇರದ ಸರ್ಕಾರದ ಸುಪರ್ದಿನಲ್ಲಿರಬೇಕು. ಸರ್ಕಾರ ಕೂಡ ಕಡೆಯ ಪಕ್ಷ ಇಂತಹ ವಿಷಯಗಳಲ್ಲಾದರು ಪ್ರಾಮಾಣಿಕವಾಗಿ ವರ್ತಿಸಬೇಕು. ಮೊಂದೊಂದು ದಿನ ಬರಬಹುದಾದ "ಗಾಂಧೀ" ಎಂದರೆ "ಏನು" ಎಂದು ಕೇಳುವ ಜನಾಂಗಕ್ಕೆ ಕೊಡುವ ಉತ್ತರಕ್ಕೆ ಇಂತಹ ಸಂಗ್ರಹಣೆ ಪೂರಕವಾಗಿರುತ್ತದೆ.

ಇದ್ಯಾಕೋ ಪದೆ ಪದೆ ನೆನಪಾಗುತ್ತಿದೆ:

ದಕ್ಷಿಣ ಆಫ್ರಿಕಾದಲ್ಲಿ ನೆಲೆಸಿದ್ದಾಗ ಒಮ್ಮೆ ಭಾರತಕ್ಕೆ ಬಂದಿರುತ್ತಾರೆ. ಅವರ ಭಾರತ ಭೇಟಿಯನ್ನು ತಮ್ಮ ವಿರುದ್ಧ ಸಂಚು ಮಾಡುವುದಕ್ಕಾಗೆಂದೆ ದ. ಆಫ್ರಿಕಾದ ಕೆಲ ಬಿಳಿಯರು ಭಾವಿಸಿರುತ್ತಾರೆ. ಗಾಂಧೀಜಿಯ ವಾಪಸ್ಸು ಬಂದ ಕೂಡಲೆ ಅವರ ಮೇಲೆ ಹಲ್ಲೆ ನಡೆಸಲು ಕಾಯುತ್ತಿರುತ್ತಾರೆ. ಹಾಗೆ ಕಾಯುತ್ತಿರುವ ವೇಳೆಯಲ್ಲಿ ಗಾಂಧೀಜಿಯವರ ವಿರುದ್ಧ ಘೋಷಣೆಗಳನ್ನು ಕೂಗುತ್ತಿರುತ್ತಾರೆ.
ಇದು ಆ ಘೋಷಣೆಗಳಲ್ಲೊಂದು:
Hang old Gandhi
On the sour apple tree.

ನಾವೀಗ ಮಾಡುತ್ತಿರುವುದೇನು?

No comments: