Friday, January 25, 2008

ಮಹಾಮಹಿಮರು ಚಿತ್ರಮಂದಿರ ಹುಡುಕಿಕೊಂಡು ಬರುವಾಂತಾಗಲಿ

ಹಿಂದೆಂದಿಗಿಂತ ಕನ್ನಡ ಚಿತ್ರಗಳು ಈಗ ಸಾಲು ಸಾಲಾಗಿ ಯಶಸ್ವಿಯಾಗುತ್ತಿವೆ. ಎಲ್ಲರ ಗಮನ ಸೆಳೆಯುತ್ತಿವೆ. ನಿಂತ ನೀರಂತಿದ್ದ ಚಿತ್ರರಂಗಕ್ಕೆ ಚಾಲನೆ ಸಿಕ್ಕಿರುವುದಂತು ನಿಜ. ಮುಂಗಾರು ಮಳೆ, ದುನಿಯಾದಂಥ ಸ್ವಮೇಕ್ ಚಿತ್ರಗಳು ಗೆದ್ದು ಅರೋಗ್ಯಕರ ಬೆಳವಣಿಗೆಗೆ ನಾಂದಿ ಹಾಡಿವೆ. ಹೊಸದಾಗಿ ಬರುತ್ತಿರುವ ಚಿತ್ರಗಳ ಬಗ್ಗೆ ಕುತೂಹಲ ಮತ್ತು ನಿರೀಕ್ಷೆಗಳು ಹೆಚ್ಚಾಗುತ್ತಿವೆ. ಮುಂಚೆಲ್ಲಾ ಅಭಿಮಾನಿಗಳು ಮಾತ್ರ ತಮ್ಮ ನೆಚ್ಚಿನ ನಾಯಕನ ಮುಂಬರುವ ಚಿತ್ರಗಳಿಗೆ ಕಾಯುತ್ತಿದ್ದರು. ಚಿತ್ರ ಯಶಸ್ಸು ಕಂಡ ನಂತರ ಇತರರು ಚಿತ್ರ ನೋಡಲು ಹೋಗುತ್ತಿದ್ದರು. ಅಭಿಮಾನಿಗಳ ಅಭಿಮಾನ, ಅವರ ಸಂಘಟನೆಗಳು, ಚಿತ್ರ ಬಿಡುಗಡೆಯ ದಿನ ಹಬ್ಬದ ಸೃಷ್ಟಿಸಿ ತಾವು ಮಾಡಿದ 'ಸ್ಟಾರ್'ಗಳನ್ನು ಮೆರೆವಣಿಗೆಯ ಮುಖಾಂತರ ಚಿತ್ರಮಂದಿರಕ್ಕೆ ಕೊಂಡೊಯ್ಯುವುದು ಇವೆಲ್ಲ ಈಗ ಕಡಿಮೆಯಾಗಿವೆ.

ಈಗ ಚಿತ್ರಾಭಿಮಾನಿಗಳಿಗಿಂತ ಹೆಚ್ಚಾಗಿ ಮಾಧ್ಯಮಗಳೆ ಚಿತ್ರ ಬಿಡುಗಡೆಯಾಗುವುದನ್ನು ತುದಿಕಾಲ ಮೇಲೆ ನಿಂತು ಕಾಯ್ದನ್ತಿವೆ. ಮುಂಗಾರು ಮಳೆಯ ಯಶಸ್ಸಿನ ಫಲವೋ ಏನೋ ಗಾಳಿಪಟ ಚಿತ್ರದ ಬಗ್ಗೆ ಪುಟಗಟ್ಟಲೆ ಬರೆಯುತ್ತಿವೆ. ಗಾಳಿಪಟ ಚಿತ್ರ ಬಿಡುಗಡೆಯಾದ ದಿನವೇ ಮಧ್ಯಾಹ್ನ 2 ಗಂಟೆಗೆಲ್ಲಾ ರೆಡಿಫ್(Rediff.com) ವೆಬ್ ಸೈಟ್ನಲ್ಲಿ ಚಿತ್ರದ ವಿಮರ್ಶೆ ಬಂದಿದೆ. ಅದೂ ಇಂಗ್ಲೀಷ್‌ನಲ್ಲಿ. ಕರ್ನಾಟಕದ ಅತ್ಯಧಿಕ ಪ್ರಸಾರದ ದಿನ ಪತ್ರಿಕೆ 'ವಿಜಯ ಕರ್ನಾಟಕ' ಮುಖ ಪುಟದಲ್ಲಿ "ಗಾಳಿಪಟ ಧೂಳಿಪಟ" ಎಂಬ ತಲೆ ಬರಹದಡಿಯಲ್ಲಿ ಮರುದಿನವೇ ಚಿತ್ರದ ಬಗ್ಗೆ ಬರೆದಿದೆ. ತಮಾಷೆಯೆಂದರೆ, Rediff.com ಮತ್ತು ವಿಜಯ ಕರ್ನಾಟಕದಲ್ಲಿನ ವಿಮರ್ಶೆಗಳು ತದ್ವಿರುದ್ಧವಾಗಿವೆ. ಮಾಧ್ಯಮಗಳಲ್ಲಿ ಬಂದ ವರದಿ ಓದಿ ಸಿನೆಮಾಗೆ ಹೋಗುವ ಮಂದಿ ಯಾವುದನ್ನು ಓದಿ ಹೋಗಬೇಕೊ? ಬೇಡವೊ? ಎಂದು ಹೇಗೆ ನಿರ್ಧರಿಸುತ್ತಾರೊ ಗೊತ್ತಿಲ್ಲ.

ಅದೇನೆ ಇರಲಿ, ಚಿತ್ರವೊಂದಕ್ಕೆ ಈ ಮಟ್ಟಿನ ಪ್ರಾಶಸ್ತ್ಯ ಕೊಡಬೇಕಿತ್ತಾ? ಇದು ಒಳ್ಳೆಯ ಲಕ್ಷಣವ? ಸಾಮಾನ್ಯವಾಗಿ ಗುರುವಾರ ಅಥವಾ ಶುಕ್ರವಾರ ಬಿಡುಗಡೆಯಾದ ಚಿತ್ರಗಳ ಬಗ್ಗೆ ಪತ್ರಿಕೆಗಳು ಭಾನುವಾರದಂದು ತಮ್ಮ ಅಭಿಪ್ರಾಯ ಅದೂ ಒಳಪುಟಗಳಲ್ಲಿ ಪ್ರಕಟಿಸುವುದು ವಾಡಿಕೆ. ಹಾಗೆ ನೋಡಿದರೆ ನಮ್ಮ ಕನ್ನಡಿಗರು ಯಾವುದೇ ವಿಷಯದಲ್ಲಾಗಲಿ ಅಂಕೆ ಮೀರಿ ವರ್ತಿಸುವವರಲ್ಲ. ರಜನೀ ಕಾಂತ್ನ ಹೊಸ ಸಿನೆಮಾಕ್ಕೆ ಹೊಸ ಉಡುಗೆಯಲ್ಲಿ ಹೋಗುವುದು, ನಟ, ನಟಿಯರನ್ನು ದೇವರ ಸ್ಥಾನಕ್ಕೇರಿಸುವುದು, ನೆಚ್ಚಿನ ನಟರನ್ನು ಮಂತ್ರಿ, ಮುಖ್ಯಮಂತ್ರಿಗಳನ್ನಾಗಿ ಮಾಡುವಂತ ಅತಿರೇಕಗಳು ಅದೃಷ್ಟವಶಾತ್ ನಮ್ಮಲಿಲ್ಲ. ಸಿನೆಮಾವೊಂದರ ಬಗ್ಗೆ ಈಗ ಬರೆಯುತ್ತಿರುವ ಪರಿ ನೋಡಿದರೆ ಜನರಲ್ಲ್ಲಿ ಇಲ್ಲದ ಆಸಕ್ತಿ ಮೂಡಿಸಿ ಮುಂದೊಂದು ದಿನ ಮೇಲಿನ ಅತಿರೇಕಗಳು ಇಲ್ಲೂ ಗೋಚರಿಸಬಹುದು.

ಅಣ್ಣನ ಹೊಡೆತಕ್ಕಿಂತ ಅತ್ತಿಗೆ ನಕ್ಕಿದ್ದು ಹೀನಾಯ ಎಂಬಂತೆ ಕೆಲವೊಮ್ಮೆ ಚಿತ್ರದ ಸೋಲಿಗಿಂತ ಮಾದ್ಯಮಗಳ ಟೀಕಾ ಪ್ರಹಾರಕ್ಕೆ ಚಿತ್ರೊದ್ಯಮಿಗಳು ನೊಂದಿರುವುದು ಉಂಟು. ಒಬ್ಬ ನಟನಿಂದ ಉತ್ತಮ ನಟನೆ ಮತ್ತು ಎಲ್ಲರಲ್ಲಿರಬೇಕಾದ ಮಾನವತೆ ಬಿಟ್ಟು ಉಳಿದವೆಲ್ಲಾ ಅನಪೇಕ್ಷಾರ್ಹ.

ಅತಿಯಾದ ಪ್ರಶಂಸೆ, ಅರ್ಹತೆ ಮೀರಿ ಟೀಕೆ, ಅನಾವಶ್ಯಕವಾಗಿ ಹೇರುವ "ನಿರೀಕ್ಷೆಗಳ" ಒತ್ತಡ ಕಲಾವಿದನಲ್ಲಿರುವ ಕಲಾತ್ಮಕತೆಯನ್ನು ಘಾಸಿಗೊಳಿಸುವಂತಾಗಬಾರದು. ಒತ್ತಡವಿರುವಲ್ಲಿ ಕ್ರಿಯಾತ್ಮಕತೆ ಇರದು.

ಸಾಯಿಪ್ರಕಾಶ್, ಜೆ.ಜೆ. ಕೃಷ್ಣ, ಬಿ. ಆರ್. ಕೇಶವ್ ಸ್ವಲ್ಪ ಹಿಂದಕ್ಕೆ ಹೋದರೆ ಕೆ.ಎಸ್.ಆರ್. ದಾಸ್, ಭಾರ್ಗವ ಮುಂತಾದ ಕೆಲಸ ಮಾಡಲೂ ತೆಗೆಯಲೂ ಗೊತ್ತಿಲ್ಲದ ನಿರ್ದೇಶಕರುಗಳಿಗಿನ್ತ ಯೋಗರಾಜ ಭಟ್ ಪರವಾಗಿಲ್ಲ ಎನಿಸುತ್ತಾರೆ. ಸಿನೆಮಾ ರಂಗ ಜೂಜಿದ್ದಂತೆ. ಚಿತ್ರಗಳ ಸೋಲು-ಗೆಲುವು ಬಹುಪಾಲು ಅದೃಷ್ಟವನ್ನು ಅವಲಂಬಿಸಿರುತ್ತದೆ. ಚಿತ್ರ ಗೆದ್ದಾಗ ಅಟ್ಟಕ್ಕೇರಿಸಿ ಸೋತಾಗ ಪಾತಾಳಕ್ಕೆ ದೂಡುವುದು ಸಲ್ಲದ ನಡಾವಳಿ. ಭಾರತೀಯ ಕ್ರಿಕೆಟ್ ತಂಡಕ್ಕೂ ಇದೇ 'ಮರ್ಯಾದೆ'ಯಾಗುತ್ತಿದೆ.

ಪ್ರೇಮ್ ಅವರ ಇತ್ತೀಚೆಗೆ ಬಂದ ಚಿತ್ರದ ಹೆಸರು "ಪ್ರೀತಿ ಏಕೆ ಭೂಮಿಮೇಲಿದೆ" ಇದೊಂದು ಪ್ರಶ್ನಾರ್ಥಕ ವಾಕ್ಯ. ಆದರೆ ವಾಕ್ಯದ ಕೊನೆಯಲ್ಲ್ಲಿ ಪ್ರಶ್ನಾರ್ಥಕ ಚಿಹ್ನೆಯೇ ಇಲ್ಲ. 'ಭೂಮಿ' ಮತ್ತು 'ಮೇಲಿದೆ' ಎಂಬ ಎರಡು ಬೇರೆ ಬೇರೆ ಪದಗಳನ್ನು ಒಟ್ಟುಗೂಡಿಸಿದ್ದಾರೆ. ಇಂತಹ ಸಣ್ಣ, ಪುಟ್ಟ ತಪ್ಪುಗಳಾದಾಗ ಕೂಡ ತಿದ್ದುವುದು ಅಗತ್ಯ. ಇಲ್ಲದಿದ್ದರೆ ತಪ್ಪುಗಳ ಸಂಖ್ಯೆ ದೊಡ್ಡದಾಗುತ್ತವೆ; ತಪ್ಪುಗಳು ಕೂಡ ದೊಡ್ಡದಾಗುತ್ತವೆ. ಮಾಧ್ಯಮಗಳು ಇಂಥವುಗಳನ್ನೆಲ್ಲ ಗಮನಿಸಿ ಬರೆದಾಗ ಖಂಡಿತವಾಗಿ ಎಚ್ಚರವಹಿಸಿ ಕೆಲಸ ಮಾಡುತ್ತಾರೆ. ಬಳಸುವ ಭಾಷೆಯ ಬಗ್ಗೆ ಲಕ್ಷ್ಯವಿಡುತ್ತಾರೆ. ಇದರಿಂದ ಸುಂದರ ಕನ್ನಡ ಕೇಳಲು, ಓದಲು ಸಿಗುತ್ತದೆ.

ಅಣ್ಣನ ಹೊಡೆತಕ್ಕಿಂತ ಅತ್ತಿಗೆ ನಕ್ಕಿದ್ದು ಹೀನಾಯವೆಂಬಂತೆ ಚಿತ್ರ ಸೋತದಕ್ಕಿಂತ ಪತ್ರಿಕೆಗಳ ಟೀಕಾ ಪ್ರಹಾರಕ್ಕೆ ಚಿತ್ರೋದ್ಯಮಿಗಳು ನೊಂದಿ ರುವುದು ಉಂಟು. ಎಲ್ಲವೂ ಮಿತಿಯಲ್ಲಿದ್ದರೆ ಚನ್ನ. ಮಿತಿ ಮೀರಿದರೆ ಆಪತ್ತು.

**
ಭಗವಂತನ (ಕೃಷ್ಣ) ಕುರಿತು "ನೀನಗಲೆ ಬದುಕಿಲ್ಲೆಮೆಗೆ" ಎಂದು ಬರೆಯುವ ಮಡಿವಂತರೂ ವೈದಿಕರೂ ಆದ ಪು.ತಿ. ನರಸಿಂಹಾಚಾರ್ಯರು ತಾವು ಮುದ್ದಾಮ್ ಮುಂಬೈ ನಗರಕ್ಕೆ ಬಂದಿರುವುದು ಎರಡು ಕಾರಣಗಳಿಗೆ, ಒಂದು ನಮ್ಮ ತಂದೆಯ ಶ್ರಾದ್ಧ ಮಾಡಲು ಮತ್ತು Sound of Musicಸಿನೆಮಾ ನೋಡಲು ಎಂದು ತಿಳಿಸಿರುವುದನ್ನು ಗೌರೀಶ್ ಕಾಯ್ಕಿಣಿಯವರು ತಮ್ಮ ಒಂದು ಲೇಖನದಲ್ಲಿ ತಿಳಿಸಿದ್ದಾರೆ. ಶ್ರಾದ್ಧ ಮತ್ತು ಸಿನೆಮಾ ಇವೆರಡನ್ನು ಒಟ್ಟೊಟ್ಟಿಗೆ ಮಾತಾಡುವುದು ಎಂದರೆ ಎಂಥ ಅಸಂಬದ್ಧ ಪ್ರಲಾಪ ಅದರಲ್ಲೋ ಪು.ತಿ. ನ ರಂತವರು. ಅಂದರೆ ಕವಿವರ್ಯರಿಗೆ ಆ ಸಿನೆಮಾ ನೋಡುವ ಉತ್ಕಟತೆ ಎಷ್ಟಿದ್ದೀತು ಮತ್ತು ಇಂತಹ ಮಹನೀಯರಲ್ಲಿ ಹುಟ್ಟಿಸಿರುವ ಆ ಸಿನೆಮಾ ಯಾವ ಮಟ್ಟದಲ್ಲಿರಬಹುದು ಊಹಿಸಿ. Sound of Music ಚಿತ್ರ ನಿಜಕ್ಕೂ ಒಂದು ಚಿತ್ರರತ್ನ.

ಇಂತಹ ಚಿತ್ರರತ್ನಗಳು ಕನ್ನಡದಲ್ಲೂ ಬರಲಿ; ಮಹಾಮಹಿಮರು ಚಿತ್ರಮಂದಿರ ಹುಡುಕಿಕೊಂಡು ಬರುವಾಂತಾಗಲಿ ಎಂದು ಆಶಿಸುತ್ತೇನೆ.
**

1 comment:

ಬಾನಾಡಿ said...

ಪತ್ರಿಕೆ ಮತ್ತು ಮಾಧ್ಯಮದವರು ಮಾಡುವಷ್ಟು ಆವಂತಕಾರಿ ಚಟುವಟಿಕೆ ಇನ್ನೆಲ್ಲೂ ನಡೆಯೋದಿಲ್ಲ ಅಂತನಿಸುತ್ತದೆ.

ಒಲವಿನಿಂದ
ಬಾನಾಡಿ