Friday, November 2, 2007

ರಾಜ್ಯೋತ್ಸವದ ನೆಪದಲ್ಲಿ...

ನಾವು ನವಂಬರ್ ಒಂದನ್ನು ಕರ್ನಾಟಕ ಏಕೀಕರಣಗೊಂಡ ನೆನಪಿನಲ್ಲಿ ರಾಜ್ಯೋತ್ಸವವನ್ನಾಗಿ ಆಚರಿಸುತ್ತಾ ಬಂದಿದ್ದೇವೆ. ಈ ವರ್ಷ ಮಾತ್ರ ಜನಾದೇಶ ಪಡೆದ ಯಾವುದೇ ಸರ್ಕಾರವಿಲ್ಲದೆ ಅನಾದೇಶದ "ರಾಜ್ಯಪಾಲೋತ್ಸವ" ಎನ್ನುವಂತಾಗಿದೆ. ಈ ರೀತಿಯ "ರಾಜ್ಯಪಾಲೋತ್ಸವ" ರಾಜ್ಯಕ್ಕೆ ಮೂರನೆಯದು. ನಮ್ಮ ಕನ್ನಡ ಭಾಷೆ ಸಂಸ್ಕೃತದ ನಂತರ ವೇಗವಾಗಿ ಅವನತಿ ಹೊಂದುತ್ತಿರುವ ಪ್ರಮುಖ ಭಾರತೀಯ ಭಾಷೆಯೆಂದು ವರದಿಯೊಂದು ತಿಳಿಸಿದೆ. ಭೌಗೋಳಿಕವಾಗಿ ವಿಶಾಲವಾಗಿದ್ದು, ಸಾವಿರಾರು ವರ್ಷಗಳ ಇತಿಹಾಸವಿದ್ದು, ಸಾಹಿತ್ಯಕಾವಾಗಿ ದೇಶ ಭಾಷೆಗಳಲ್ಲೇ ಶ್ರೀಮಂತವಾಗಿರುವ ಕನ್ನಡದ್ದೆ ಈ ಸ್ಥಿತಿಯಾದರೆ ಲಿಪಿಯೇ ಇಲ್ಲದ, ಒಂದು ಸಣ್ಣ ಪ್ರಾಂತಕ್ಕೆ ಸೇರಿದ, ಒಂದು ಜಾತಿ ಅಥವ ಜನಾಂಗಕ್ಕೆ ಮಾತ್ರ ಸೇರಿದ ಹಲವಾರು ಭಾಷೆ, ಉಪಭಾಷೆಗಳ ಗತಿಯೇನು? ಭಾರತದ ಘೋಷವಾಕ್ಯದಂತಿರುವ "ವೈವಿಧ್ಯತೆಯಲ್ಲಿ ಏಕತೆ" ಅಳಿಸಿಹೋಗುತ್ತಿದೆ. ಎಲ್ಲರಿಗೂ ಇಂಗ್ಲೀಷ್ ಒಂದೇ ಸಂಪರ್ಕ ಭಾಷೆಯಾಗಿ, ಉಡುಗೆ-ತೊಡುಗೆಯಷ್ಟೆಲ್ಲದೇ ಅಡುಗೆಯಲ್ಲು ಸಮಾನತೆ ಬರುತ್ತಿದೆ. ಆಗ ವಿತ್ತ ಮಂತ್ರಿಯಾಗಿದ್ದ ಇಂದಿನ ಪ್ರಧಾನಿ ಮನ್ಮೋಹನ್ಸಿನ್ಗ್ (ಮನ್ ಮೋಹನ್ ಸಿಂಗ್)ಅವರು ಪರಿಚಯಿಸಿದ ಜಾಗತೀಕರಣ ವರವೂ ಹೌದು, ಶಾಪವೂ ಹೌದು. ನಮ್ಮ ನೆಲದ ಭಾಷೆ, ಸಂಸ್ಕೃತಿ ಕುಲಗೆಡಲು ಜಾಗತೀಕರಣದ ಕೊಡುಗೆ ಅಪಾರ.

ಇಂಗ್ಲೀಷ್ ಈಗ ಬರಿಯ ಭಾಷೆಯಾಗಿರದೆ ಅನ್ನದ ಪ್ರಶ್ನೆಯಾಗಿದೆ. ಇಂಗ್ಲೀಷ್ ಗೊತ್ತಿಲ್ಲದವನು ಜೀವನ ನಡೆಸುವುದು ಅದರಲ್ಲೂ ಬೆಂಗಳೂರಿನಲ್ಲಿ ನಡೆಸುವುದು ದುರ್ಭರವಾಗಿದೆ. ಬುಡಕಟ್ಟು ಜನಾಂಗ ಸೋಲಿಗರಿಂದ ಹಿಡಿದು ಕನ್ನಡದ ಕಟ್ಟಾಳು, ಕನ್ನಡಪರ ಹುಟ್ಟು ಹೋರಾಟಗಾರ ಎಂದೆಲ್ಲಾ ಕರೆಯಿಸಿಕೊಳ್ಳುವ ವಾಟಾಳ್ ನಾಗರಾಜರ ಮನೆಯ ಮಕ್ಕಳು ಕೂಡ ಇಂಗ್ಲೀಷ್ ಮಾಧ್ಯಮದ ಶಾಲೆಗೆ ಹೋಗುತ್ತಿದ್ದಾರೆ. ಪ್ರಾಥಮಿಕ ಶಾಲೆಯವರೆಗಾದರೂ ಸರ್ಕಾರ ಕನ್ನಡ ಕಡ್ಡಾಯ ಮಾಡದಿದ್ದರೆ ಪ್ರತಿಯೊಬ್ಬರೂ ತಮ್ಮ ಮಕ್ಕಳನ್ನು ಇಂಗ್ಲೀಷ್ ಮಾಧ್ಯಮಕ್ಕೆ ಕಳುಹಿಸುವುದು ಅನಿವಾರ್ಯವಾಗುತ್ತದೆ. ಕನ್ನಡ ಓದಲು, ಬರೆಯಲು ಕಲಿಯದೆ ವ್ಯವಹಾರಕ್ಕೆಂದು ಮಾತಾಡುವುದನ್ನು ಕಲಿತು ನಮ್ಮೊಡನಿರುವ ತೆಲುಗ, ತಮಿಳ, ಮಲಯಾಳಿ, ಮಾರ್ವಾಡಿ ಇತರರಿಗೂ ನಮಗೂ ಯಾವುದೇ ವ್ಯತ್ಯಾಸವಿರುವುದಿಲ್ಲ.

ಮೊದಲು ಕನ್ಟೋನ್ಮೆಂಟ್, ಹಲಸೂರು, HAL ಸುತ್ತಮುತ್ತ ಹೀಗೆ ಕೆಲವು ಬೆಂಗಳೂರಿನ ಆಯ್ದ ಭಾಗಗಳಲ್ಲಿ ಮಾತ್ರ ಕಣ್ಣಿಗೆ ಬೀಳುತ್ತಿದ್ದ ತಮಿಳು, ಮಲಯಾಳಿ ಇತರೆ ಭಾಷೆಯ ಪತ್ರಿಕೆಗಳು ಈಗ ಬಹುತೇಕ ಬೆಂಗಳೂರಿನ ಎಲ್ಲ ಭಾಗದ ದಿನಪತ್ರಿಕೆ ಮಾರಾಟ ಮಾಡುವ ಅಂಗಡಿಗಳಲ್ಲಿಯೂ ಕಾಣಿಸಿಕೊಳ್ಳುತ್ತಿವೆ. ಬೇರೆ ಭಾಷೆಯವರು ಇಲ್ಲಿ ಬಂದು ಬೇರು ಬಿಟ್ಟಿದ್ದಾರೆ ಮತ್ತು ತಮ್ಮ ತಮ್ಮ ನಾಡಿನಲ್ಲಿರುವಂತೆ ಹಾಯಾಗಿ ಇದ್ದಾರೆ. ಇಲ್ಲಿರುವ ಪರಭಾಷಿಕರಿಗೆ ಕನ್ನಡ ಕಲಿಯುವ ಉಮೇದು ಮೊದಲೇ ಇಲ್ಲ ನಾವು ಕೂಡ ಅಂತಹ ವಾತಾವರಣ ನಿರ್ಮಿಸಿಲ್ಲ. ಇದರ ತಲೆ ಮೇಲೆ ಹೊಡೆದಂತೆ ಇಲ್ಲಿನವರೇ ಪರಭಾಷೆ ಕಲಿತು ಅವರೊಡನೆ ವ್ಯವಹರಿಸುವುದೊಂದು ಕೆಟ್ಟ ಚಾಳಿ ನಮ್ಮಲ್ಲಿದೆ. HAL, ITI ಕಾಲೋನಿ, ಹಲಸೂರು, ಓಕಳಿ ಪುರಗಳಂತ ತಮಿಳರ ಪ್ರಭಾವವಿರುವ ಪ್ರದೇಶಗಳಲ್ಲಿರುವ ಬಹುಶಃ ಎಲ್ಲ ಕನ್ನಡಿಗರಿಗು ತಮಿಳು ಮಾತಾಡಲು ಬರುತ್ತದೆ. ಮಲ್ಲೇಶ್ವರ, ಮಲ್ಲೇಶ್ವರಮ್ ಆಗಿ, ಓಕಳಿಪುರ, ಓಕಳಿಪುರಮ್ ಆಗಿರೋದು ಬೇರೆಯವರ ಪ್ರಭಾವ ತಿಳಿಸುತ್ತದೆ. ನನಗೆ ಅತ್ಯಂತ ಆಶ್ಚರ್ಯ ತಂದ ಸಂಗತಿಯೆಂದರೆ, ಮೊನ್ನೆ ಹೆಗ್ಗೋಡಿಗೆ ಹೋಗುವ ದಾರಿಯಲ್ಲಿ ಕಂಡ "ಆನಂದ ಪುರಮ್" ಎಂಬ ಊರಿನ ಹೆಸರು. ಅಚ್ಚ ಕನ್ನಡದ ಶಿವಮೊಗ್ಗ ಜಿಲ್ಲೆಯಲ್ಲಿ "ಪುರಮ್" ಬರಲು ಕಾರಣ ಸಂಸ್ಕೃತ ಅಲ್ಲ ಬದಲಿಗೆ ಅಲ್ಲೊಂದು ಹಳೆಯ ರೈಲ್ವೇ ಸ್ಟೇಷನ್ ಇದೆ. ಸದರನ್ ರೈಲ್ವೆನಲ್ಲಿದ್ದ ಕನ್ನಡಿಗರ ಅಭಾವ ಮತ್ತು ಇತರರ ಪ್ರಭಾವಕ್ಕೆ ಇದೊಂದು ನಿದರ್ಶನ.

ಸುಮಾರು 65 ವಯಸ್ಸಿನ ನನ್ನ ಸ್ನೇಹಿತನ ತಾಯಿಯೊಬ್ಬರು ಹುಟ್ಟಿದ್ದು, ಬೆಳೆದೆದ್ದು, ಮದುವೆಯಾಗಿ ಗಂಡನ ಮನೆ ಸೇರಿದ್ದು, ತಾಯಿ, ಅಜ್ಜಿ ಆಗಿದ್ದು ಎಲ್ಲವೂ ಬೆಂಗಳೂರಿನಲ್ಲೇ. ಅವರಿಗೆ ಇವತ್ತಿಗೂ ಕನ್ನಡ ಮಾತಾಡಲು ಬರುವುದಿಲ್ಲ. ಈ ಉದಾಹರಣೆ ಸಾ0ಕೇತಿಕ ಮಾತ್ರ. ಇಂತಹ ಅನೇಕ ಮಂದಿ ನಮ್ಮೊಡನೆ ನಿರಾಳವಾಗಿದ್ದಾರೆ ಮತ್ತು ನಮಗೆ ಇದೊಂದು ಸೋಜಿಗವೆನಿಸದಿರುವುದೊಂದು ಸೋಜಿಗ.

ಇತ್ತೀಚಿನ ತಲೆಮಾರಿನ ಕನ್ನಡದ ಲೇಖಕರ ಬರವಣಿಗೆಯನ್ನು ಅವರ ಸ್ವಂತ ಮಕ್ಕಳೇ ಶಾಸ್ತ್ರಾಕ್ಕಾದರೂ ಓದಿರುವುದಿಲ್ಲ. ಅಗ್ನಿ ಶ್ರೀಧರ್ ಅವರ ಆತ್ಮ ಚರಿತ್ರೆ "ದಾದಾಗಿರಿಯ ದಿನಗಳಲ್ಲಿ" ತಮ್ಮ ಬರವಣಿಗೆಯ ಒಂದಕ್ಷರವನ್ನು ತಮ್ಮ ಮಕ್ಕಳು ಓದಿಲ್ಲ ಎಂದು ಹೇಳಿದ್ದಾರೆ. ಕಾರಣ ಸರಳ English mediumನಲ್ಲಿ ಓದೀರ್ತ್ತಾರೆ. ಕನ್ನಡ ಓದು ಬರಹ ಬಾರದ ಒಂದು ಜನಾಂಗ ಈಗಾಗಲೇ ಬಂದುಬಿಟ್ಟಿದೆ. ಅದರ ಮುಂದಿನ ಜನಾಂಗದ ಬಗ್ಗೆ ಯೋಚಿಸುವುದು ಕೂಡ ವ್ಯರ್ಥ.

........ಇನ್ನೂ ಸ್ವಲ್ಪ ಇದೆ ಸಮಯ ಸಿಕ್ಕಾಗ, ಪ್ರಾಯಶಃ ಈ ವಾರಾಂತ್ಯದಲ್ಲಿ ಬರೆಯುತ್ತೀನಿ.

No comments: