Monday, October 22, 2007

ನೆನಪಿನ ಶಾಲೆ


ನನ್ನ ನೆನಪಿನ ಬುತ್ತಿಯಲ್ಲಿ ಬಾಲ್ಯದ್ದೇ ಬಹುಪಾಲು. ನಾನು ಒಂದರಿಂದ ನಾಲ್ಕನೇ ತರಗತಿಯವರೆಗೆ ಓದಿದ್ದು ಕುಣಿಗಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ. ನಮ್ಮ ಶಾಲೆಯ ಕಟ್ಟಡದ ವಿನ್ಯಾಸವೇ ಒಂದು ವಿಶೇಷವಾಗಿತ್ತು. ಶಾಲೆಯ ಕಟ್ಟಡದ ಗೋಡೆಗಳಿಗೆ ಹೊರಗಡೆಯಿಂದ ಆಧಾರಕ್ಕೆಂದು ಜಾರು ಬಂಡೆಯಂತಿರುವ ಮತ್ತೊಂದು ಸಣ್ಣ ಗೋಡೆಯ ಆನಿಕೆಗಳಿದ್ದವು. ಈಗ ಪಿಲ್ಲರು, ಬೀಮು ಇತ್ಯಾದಿ ಮುಂದುವರೆದ ತಂತ್ರಜ್ಞಾನದಿಂದ ಇಂತಹ ಕಟ್ಟಡಗಳು ಕಾಣಸಿಗುವುದಿಲ್ಲ. ಒಳಭಾಗದಲ್ಲಿ ನೆಲಕ್ಕೆ ಕಡುಕಪ್ಪು ಬಣ್ಣದ ಕಡಪದ ಕಲ್ಲನ್ನು ಹಾಸಿದ್ದರು. ನಾವು ನಡೆದಾಡುತ್ತಿದ್ದರೆ ಬೆವರಿನಿಂದ ನಮ್ಮ ಹೆಜ್ಜೆ ಗುರುತು ಕ್ಷಣಕಾಲಕ್ಕೆ ಕಲ್ಲಿನ ಮೇಲೆ ಮೂಡಿ ಮಾಯವಾಗುತ್ತಿದ್ದವು(ನಮಗೆ ಯೂನಿಫಾರಮ್ ಇರಲಿಲ್ಲ ಮತ್ತು ಬರಿಗಾಲಲ್ಲೆ ಶಾಲೆಗೆ ಹೋಗುತ್ತಿದ್ದೆವು). ನಮಗೆ ಅದೂ ಒಂದು ಆಟವೇ. V ಆಕಾರದಲ್ಲಿ ಪಾದಗಳನ್ನು ಕೂಡಿಸಿದಾಗ ಮೂಡಿದ ಹೆಜ್ಜೆಗಳ ಗುರುತನ್ನು "ಸಾವಧಾನ್" ಎಂದು ಮತ್ತು ಬಿಡಿಬಿಡಿಯಾಗಿ ಹೆಜ್ಜೆಗಳ ಗುರುತು ಮಾಡಿ "ವಿಶ್ರಾಮ್" ಎಂದು ಆಡುತ್ತಿದ್ದೆವು.

ನಮ್ಮ ಶಾಲೆಯ ಹಿತ್ತಲಲ್ಲಿ ಸುಂದರವಾದ ಕೈತೋಟವೊಂದಿತ್ತು. ತೋಟದ ಹಾರೈಕೆಗೆಂದು ವಿಶಾಲವಾದ ನೀರಿನ ತೊಟ್ಟಿಯೊಂದನ್ನು ಕಟ್ಟಿದ್ದರು. ಸದಾ ತುಂಬಿದ ಹಾಗಿರುತ್ತಿದ್ದ ಆ ನೀರಿನ ತೊಟ್ಟಿಯ ಕಟ್ಟೆಗೆ ಹೊಟ್ಟೆಯನ್ನು ಹಾಕಿ, ಎರಡೂ ಕಾಲುಗಳನ್ನು ಆಚೆಗೆ ಇಳೆ ಬಿಟ್ಟು ಎದೆ ಸಮೇತವಾಗಿ ನೀರಿಗೆ ಮುಖ ಹಾಕಿ ನೀಲಗಿರಿ ಮರಗಳಿಂದ ಬಿದ್ದಿರುತಿದ್ದ "ಬುಗುರಿ" ಇತ್ಯಾದಿ ಎಲೆಗಳನ್ನು ಕೈಗಳಿಂದ ಸರಿಸಿ ನೀರನ್ನು ಕುಡಿಯುತ್ತಿದ್ದೆವು. ತಿಳಿಗೇಡಿ ನೀರು ಕೆಲವೊಮ್ಮೆ ಬರಿ ಬಾಯಿಂದ ಮಾತ್ರವಲ್ಲದೆ ಮೂಗಿನಿಂದ ಕೂಡ ನುಗ್ಗಿ ನತ್ತೇರುಸುತ್ತಿತ್ತು. ಹಾಗೆ ನತ್ತೇರಿದಾಗ ಕಣ್ಣಿನಿಂದ ಬರುತ್ತಿದ್ದ ನೀರು ನಾನು ಈಗ ತಾನೇ ಕುಡಿದ ತೊಟ್ಟಿಯ ನೀರೆಂದು ಮತ್ತು ಶುದ್ಧವಾದ ನೀರನ್ನು ಮಾತ್ರ ಕುಡಿದಿದ್ದು ಯಾವುದೇ ಕಸ ಕಡ್ಡಿ ಒಳ ಹೋಗಿಲ್ಲ , ಹಾಗೆ ಹೋಗಿದ್ದ ಪಕ್ಷದಲ್ಲಿ ಅದೂ ಕೂಡ ಕಣ್ಣಿನಿಂದ ಆಚೆ ಬರುತ್ತಿತ್ತು ಎಂದು ನಂಬಿದ್ದ ನನಗೆ ದೊಡ್ಡ ಸಮಾಧಾನ ಸಿಗುತ್ತಿತ್ತು.

ನಮಗೆಲ್ಲ ಹೇಳಿಕೊಳ್ಳಲಿದ್ದ ದೊಡ್ಡಸ್ತಿಕೆಯ ವಿಷಯವೆಂದರೆ ನಮ್ಮ ಶಾಲೆಯಲ್ಲೇ ತಯಾರಾಗಿ ಕುಣಿಗಲ್ಲು ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಿಗೆ ಸರಬರಾಜಾಗುತ್ತಿದ್ದ ಗೋಧಿ ಉಪ್ಪಿಟ್ಟು. ಈಗ ಸರ್ಕಾರಿ ಶಾಲೆಗಳಲ್ಲಿರುವ ಬಿಸಿಯೂಟದ ಪದ್ದತಿಯಂತೆ ಆಗಲೂ ಬಡ ಮಕ್ಕಳಿಗೆ ಕೊಡುತ್ತಿದ್ದರು. ನಮ್ಮ ಶಾಲೆಯ ಹಿತ್ತಲಲ್ಲಿ ಬೃಹದಾಕಾರದ ಎರಡು ಕೊಪ್ಪರಿಕೆಗಳು ಉಪ್ಪಿಟ್ಟು ತಯಾರಿಕೆಗೆಂದೆ ಇದ್ದವು.

ನಾನ್ಯಾಕೆ ಅವರ ಕಣ್ಣಿಗೆ ಶ್ರೀಮಂತನಂತೆ ಕಾಣುತ್ತಿದ್ದನೊ ಗೊತ್ತಿಲ್ಲ. ಗೋಧಿ ಉಪ್ಪಿಟ್ಟನ್ನು ತಿನ್ನುವ ಆಸೆ ಮನಸ್ಸಿನಲ್ಲಿದ್ದರು ಎಲ್ಲರಂತೆ ಹೋಗಿ ಸಾಲಿನಲ್ಲಿ ತೆಗೆದುಕೊಂಡು ತಿನ್ನುವ ಹಾಗಿರಲಿಲ್ಲ. ನಮ್ಮ ತಂದೆ ಬ್ಯಾಂಕ್ ಉದ್ಯೋಗಿಯಾಗಿದ್ದರು ಎಂಬ ಒಂದೇ ಕಾರಣಕ್ಕೆ ಕೊಡುತ್ತಿರಲಿಲ್ಲ. ಬೇಡವೆನ್ನುವುದನ್ನೇ ಬೇಕೆಂದು ಬಯಸುವ ವಯಸ್ಸದು. (ಎಲ್ಲಾ ವಯಸ್ಸಲ್ಲು ಹಾಗೆ). ನಾನು ಮನೆಯಿಂದ ತಂದಿರುತ್ತಿದ್ದ ಊಟದ ಡಬ್ಬಿಯನ್ನು ಕೊಟ್ಟು ಬದಲಾಗಿ ಗೆಳೆಯರಿಂದ ಉಪ್ಪಿಟ್ಟನ್ನು ಪಡೆದು ತಿನ್ನುತ್ತಿದ್ದೆ. "ಘರ್ ಕೀ ಮುರ್ಗಿ ದಾಲ್ ಬರಾಬರ್" ಅನ್ನುವ ಹಾಗೆ ಅವರಿಗೆ ನನ್ನ ಡಬ್ಬಿ ಮೃಷ್ಟಾನ್ನವಾದಾರೆ ನನಗೆ ಕೈಗೆಟಿಸಿಕೊಳ್ಳಲಾಗದ್ದನ್ನು ಪಡೆದ ತೃಪ್ತಿ. ಉಪ್ಪಿಟ್ಟಿನ ರುಚಿಯ ಬಗ್ಗೆ ಹೇಳೋದು ತುಸು ಕಷ್ಟ ಯಾಕೆಂದರೆ ಅದೊ0ಥರ ನಿರುಪದ್ರವಿ ರುಚಿ. ಅದನ್ನು ಉಪ್ಪು ಅಂತ ಬಯ್ಯಂಗಿಲ್ಲ, ಖಾರ ಅಂತ ಕೆಮ್ಮ0ಗಿಲ್ಲಾ ಇಲ್ಲ, ಸಪ್ಪೆ ಎಂದು ಗೊಣಗಂಗಿಲ್ಲ, ಉಳಿಯಾಗಿ ಮುಖ ಕಿವುಚ0ಗಿಲ್ಲ.

ರುಚಿ ಗೊತ್ತಾದರೆ ತಾನೆ ರಸಪಾಕ, ನಳಪಾಕ ಅಂತೆಲ್ಲಾ ಹೊಗಳೋದು, ಅಥವ ಕೆಟ್ಟದಾಗಿದ್ದಾರೆ ಮುಸುರೆ, ಕಾಂಕ್ರೀಟ್ ಎಂದು ತೆಗಳೋದು (ಉಪ್ಪಿಟ್ಟು ಮತ್ತು concrete ಸಮನಾರ್ಥಕ ಪದಗಳೆಂದು ಆಗ ಗೊತ್ತಿರಲಿಲ್ಲ :-) ). ಗೋಧಿಯ ನುಚ್ಚಿನಿಂದ ಮಾಡಿದ ಉಪ್ಪಿಟ್ಟಿನ ಬಣ್ಣ ಗೋಧಿಗೆಂಪು. ಅಪ್ಪಿತಪ್ಪಿ ಕೂಡ ಒಮ್ಮೆಯೂ ತಿನ್ನುವಾಗ ಈರುಳ್ಳಿ, ಮೆಣಸಿನ ಕಾಯಿ, ಮತ್ತೊಂದು ಸಿಕ್ಕಿಲ್ಲ. ಹೀಗೆ ಉಪ್ಪಿಟ್ಟಿನ ಬಣ್ಣ, ಆಕಾರಗಳ ಬಗ್ಗೆ ಹೇಳಬಹುದೇ ಹೊರತು ರುಚಿಯ ಬಗ್ಗೆ ಅಲ್ಲ. ಉಪ್ಪಿಟ್ಟಿನ ರುಚಿಯ ಬಗ್ಗೆ ವಿಮರ್ಶೆ ಯಾರ ಬಾಯಿಂದಲು (obviously, ಉಪ್ಪಿಟ್ಟು ತಿಂದವರ ಬಾಯಿಂದ) ನಾನು ಕೇಳಿಲ್ಲ ಆ ನನ್ನ school serviceನಲ್ಲಿ.

ಸೂರ್ಯ ನಾರಾಯಣ ರಾವ್. ಈ ಹೆಸರು ಕೇಳಿದರೆ ಸಾಕು ನಮ್ಮ ಚಡ್ಡಿಗಳು ಒದ್ದೆಯಾಗುತ್ತಿದ್ದವು. ಇವರು ನಮ್ಮ ಶಾಲೆಯ ಹೆಡ್ ಮಾಸ್ಟರ್ ಆಗಿದ್ದರು. ಇವರನ್ನು "ಸೂರಿ ಮೇಷ್ಟ್ರು" ಎಂದು ಕೂಡ ಕರೆಯುತಿದ್ದರು. ಶರೀರದಿಂದ ಸಣ್ಣ ಎನಿಸಿದರು ಶಾರೀರ ಮಾತ್ರ ಅಬ್ಬಬ್ಬಾ! ಅವರದು ಕ0ಚಿನ ಕಂಠ. ಅವರು ತಮ್ಮ ಏರಿದ ದ್ವನಿಯಲ್ಲಿ ದೇವರ ಭಜನೆಗಳನ್ನು ಹಾಡಿ ನಮಗೂ ಹೇಳಿಕೊಡುತ್ತಿದ್ದರು.

ಸುಬ್ರಮಣ್ಯಂ ಸುಬ್ರಮಣ್ಯಂ
ಷಣ್ಮುಖನಾಥ ಸುಬ್ರಮಣ್ಯಂ
ಶಿವ ಶಿವ ಸುಬ್ರಮಣ್ಯಂ
ಹರ ಹರ ಸುಬ್ರಮಣ್ಯಂ


ಈಗಲೂ ಈ ಹಾಡು ನನ್ನ ಕಿವಿಯಲ್ಲಿ ಪ್ರತಿದ್ವನಿಸುತ್ತದೆ. ಸೂರಿ ಮೇಷ್ಟ್ರು ಬಗ್ಗೆ ನನಗೆ ಭಯ ಮತ್ತು ವಿಸ್ಮಯ ಎರಡೂ ಇದ್ದವು. ಇವರು ಮುಖ-ಮೂತಿ ನೋಡದೆ ಕೊಡಮಾಡುತ್ತಿದ್ದ ಬಿಸಿಬಿಸಿ ಕಜ್ಜಾಯಾದಿಂದ ಭಯವಾಗುತ್ತಿತ್ತು. ವಿಸ್ಮಯ ಯಾಕೆಂದರೆ, ಮೇಷ್ಟ್ರಾಗಿದ್ದುಕೊಂಡು ಬಿಡುವಿನ ವೇಳೆಯಲ್ಲಿ ಖಾಸಗಿ ಬಸ್ಸುಗಳಿಗೆ ಏಜೆಂಟಾಗಿ ಕೆಲಸಮಾಡುತ್ತಿದ್ದರು. ಬಸ್ ಸ್ಟ್ಯಾಂಡಿನಲ್ಲಿದ್ದ ಹಣ್ಣಿನಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದರು. ಮುಖದ ಮೇಲಿದ್ದ ಮೀಸೆ ತೆಗೆದಿದ್ದಾರೆಂದರೆ ಹಿಂದಿನ ರಾತ್ರಿ ಯಾವುದು ನಾಟಕದಲ್ಲಿ ಅಭಿನಯಿಸಿದ್ದಾರೆಂದು ಖಾತರಿ. ಈ ಎಲ್ಲ ಕಾರ್ಯ-ಕಾರಣಗಳಿಂದ ನನಗವರು Hero ಆಗಿ ಕಾಣುತ್ತಿದ್ದರು.

ವಿಧಾನ ಸೌಧ ಕಟ್ಟುವ ಮೊದಲು ಸರ್ಕಾರದ ಕಚೇರಿಗಳು ಈಗಿನ ಉಚ್ಚ ನ್ಯಾಯಾಲಯದ ಕಟ್ಟಡದಲ್ಲಿದ್ದವು. ಹದಿನೆಂಟು ವಿವಿಧ ಇಲಾಖೆಗಳನ್ನು ಹೊಂದಿದ್ದರ ಕಾರಣ 'ಅಟ್ಟಾರ ಕಚೇರಿ' ಹೆಸರು ಬಂದಿರುವುದು ನಮಗೆಲ್ಲ ಗೊತ್ತು. ಅಂತೆಯೇ ಕುಣಿಗಲ್ಲಿನಲ್ಲಿ ಕೂಡ ತಾಲ್ಲೋಕು ಆಫೀಸು ಈಗಿರುವ ಸ್ವಂತ ಕಟ್ಟಡಕ್ಕೆ ಸ್ಥಳಾಂತರವಾಗುವ ಮುನ್ನ ಈಗಿನ ನಮ್ಮ ಶಾಲೆಯ ಕಟ್ಟಡದಲ್ಲಿತ್ತು. ಹೀಗಾಗಿ ನಮ್ಮ ಶಾಲೆಯನ್ನು ಎಲ್ಲರು "ಕಚೇರಿ ಸ್ಕೂಲು" ಎಂದೇ ಕರೆಯುತ್ತಿದ್ದರು.

ಸಣ್ಣವನಿದ್ದಾಗ 'ಲಗ್ನ ಪತ್ರಿಕೆ' ಚಿತ್ರದಲ್ಲಿರುವ ಸೀನು ಸುಬ್ಬು... ಸೀನು ಸುಬ್ಬು... ಹಾಡಿನಲ್ಲಿ ಬರುವ "ಕುಣಿಗಲ್ನಲ್ಲಿ ಕಚೇರಿ ಮಾಡಲು ಕಂಗಾಲಾಗಿ ಬೆದರಿದರು" ಸಾಲು ನನ್ನ ಕಿವಿಯ ಮೇಲೆ ಬಿದ್ದಾಗ ಮೈಪುಳಕಗೊಳ್ಳುತ್ತಿತ್ತು. ಕಚೇರಿ ಪದದ ವಿಸ್ತಾರ ಗೊತ್ತಿರದಿದ್ದ ಆ ಕಾಲದಲ್ಲಿ ಕಚೇರಿ ಎಂದರೆ ನಮ್ಮ "ಕಚೇರಿ ಸ್ಕೂಲು" ಅಷ್ಟೇ ಎಂದು ನಂಬಿದ್ದ ನನಗೆ ನಮ್ಮ ಶಾಲೆಗೆ ಬಂದು ಸಂಗೀತ ಕಾರ್ಯಕ್ರಮ ಮಾಡಿದ್ದಾರೆಂದು ಸಂತೋಷವಾಗುತ್ತಿತ್ತು. ಮಿಗಿಲಾಗಿ ಕೋಟೆ ಸ್ಕೂಲು, NTGMS, GKBMS, ಕಾರ್‌ಮೆಂಟು (ಇದನ್ನು ಕಾನ್ವೆಂಟ್ ಎಂದು ಓದಿಕೊಳ್ಳಬೇಕು) ಈ ಶಾಲೆಗಳನ್ನು ಬಿಟ್ಟು ನಮ್ಮ ಶಾಲೆಯ ಹೆಸರು ಮಾತ್ರ ರೇಡಿಯೊನಲ್ಲಿ ಬರುತ್ತಿದೆಯೆಂದು ಉಬ್ಬಿ ಹೋಗುತ್ತಿದೆ. ಈಗಲೂ ಸೀನು ಸುಬ್ಬು ಹಾಡು ಕೇಳಿದ ತಕ್ಶಣ ಮನಸ್ಸು ಮಾಡುತ್ತಿರುವ ಅಥವ ಮಾಡಬೇಕಾದ ಕೆಲಸ ಬಿಟ್ಟು ಶಿಸ್ತಿನ ವಿದ್ಯಾರ್ಥಿಯಂತೆ ಹೋಗಿ ಶಾಲೆಯ ಮಣೆಯ ಮೇಲೆ ಚಕ್ಕಮ್ಮಕ್ಕಳ ಹಾಕಿ ಕುಳಿತುಬಿಡುತ್ತದೆ. ಸ್ಕೂಲಿಂದಾಚೆಗೆ ಬರಲೊಲ್ಲದೇ ಹಟಮಾಡುವ ಮನಸ್ಸನ್ನು ಅನಿವಾರ್ಯವಾಗಿ ಮನಸ್ಸಿಲ್ಲದ ಮನಸ್ಸಿನಿಂದ ವಾಪಸ್ಸು ಕರೆತರಲು ಹರಸಾಹಸ ಮಾಡಬೇಕು.

2 comments:

Anonymous said...

baalyadali kaleda shaleya nenapugalanu mana muttuvamte chitrisiddira.

aMdEnu iMdU mattOrvaru taruva dabbiya tiMdiya ruchi swada heccu.

iruvudellava bittu iradiruvudege nadevude jeevana allavE?

Nadi Basavaraju said...

ನಿಮ್ಮ ಅಭಿಪ್ರಾಯ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು. ಅನಾಮಿಕರು ತಮ್ಮ ಹೆಸರನ್ನು ತಿಳಿಸಿದ್ದರೆ ಸಂತೋಷವಾಗುತ್ತಿತ್ತು.