Tuesday, September 4, 2007

ದಾಸರೆಂದರೆ ಪುರಂದರ ದಾಸರಯ್ಯ

ಹದಿನೈದು-ಹದಿನಾರನೆ ಶತಮಾನದಲ್ಲಿದ್ದ ಪುರಂದರ ದಾಸರು ರಚಿಸಿರುವ ಪದಗಳು ಪ್ರತಿಯೊಬ್ಬ ಕೇಳುಗನ ಅಥವಾ ಓದುಗನ ಮನಸ್ಸಿನಲ್ಲೊಂದು ಛಾಪು ಮೂಡಿಸಿರುತ್ತದೆ. ಅದಕ್ಕೆ ಕಾರಣ ಅವರು ತಮ್ಮ ಕೃತಿಗಳಲ್ಲಿ ಬಳಸಿರುವ ಸರಳವಾದ ಪದಗಳು ಮತ್ತು ಅವೇ ಪದಗಳಿಂದ ಕೇಳುಗನನ್ನು ತನ್ನೆಡೆಗೆ ಸೆಳೆಯಲು ಅಳವಡಿಸಿಕೊಂಡಿರುವ ತಂತ್ರಗಾರಿಕೆ. ಈಗಿನಷ್ಟು ಓದು ಬರಹವಿಲ್ಲದ ಆ ಕಾಲದಲ್ಲಿ ಬಾಯಿಂದ ಬಾಯಿಗೆ ಹರಿಯಲು, ಸುಲಭವಾಗಿ ನೆನಪಿನಲ್ಲಿಳಿಯಲು ಸಹಾಯವಾಗುವಂತೆ ಅನೇಕ ಹೊಸ ಪ್ರಯೋಗಗಳನ್ನು ದಾಸರು ಮಾಡಿದ್ದಾರೆ.

ಉದಾಹರಣೆಗೆ "ಭಾಗ್ಯದ ಲಕ್ಷ್ಮಿ ಬಾರಮ್ಮ" ಹಾಡಿನಲ್ಲಿ ಬರುವ ಎಲ್ಲ ಪಾದಗಳ (ಗದ್ಯದಲ್ಲಿ "ಸಾಲು" ಎನ್ನುತ್ತಾರೆ) ಎರಡನೆ ಅಕ್ಷರವು ಒಂದೇ ಅಕ್ಷರದ ಒತ್ತಕ್ಷರವಾಗಿದ್ದು ಇದು ಸುಲಭವಾಗಿ ಹಾಡಲು ಹಾಗೂ ನೆನಪಿನಲ್ಲಿಡಲು ಪೂರಕವಾಗಿದೆ.
ಗಮನಿಸಿ:

ಸಕ್ಕರೆ ತುಪ್ಪದ ಕಾಲುವೆ ಹರಿಸಿ
ಶುಕ್ರವಾರದ ಪೂಜೆಯ ವೇಳೆಗೆ
ಅಕ್ಕರೆಯುಳ್ಳ ಆಳ ಗಿರಿರಂಗನ
ಚೊಕ್ಕ ಪುರಂದರ ವಿಠಲನ ರಾಣಿ

ಕನ್ನಡದ ಭಗವದ್ಗೀತೆ ಎಂದೇ ಹೆಸರಾದ ಮಂಕುತಿಮ್ಮನ ಕಗ್ಗದಲ್ಲಿ ಡೀವೀಜಿಯವರು ಕೂಡ ಇದೇ ತಂತ್ರ ಬಳಸಿಕೊಂಡಿದ್ದಾರೆ. ಕಗ್ಗದಲ್ಲಿರುವ ಎಲ್ಲಾ ಚೌಪದಿಯ ಪ್ರತಿ ಪಾದದ ಎರಡನೆ ಅಕ್ಷರವು ಒಂದೇ ಅಕ್ಷರದ ಕಾಗುಣಿತಾಕ್ಷವಾಗಿರುತ್ತದೆ. ನಾನು ಕವಿಯಲ್ಲ ಆದರೆ ಗದ್ಯಕ್ಕಿಂತ ಪದ್ಯ ಸುಲಭವಾಗಿ ನೆನೆಪಿನಲ್ಲಿಯುಳಿಯುವುದರಿಂದ ಪದ್ಯಕ್ಕೆ ಮೊರೆ ಹೋಗಿದ್ದೇನೆ ಎಂದು ಕಗ್ಗದ ರಚನೆಯ ಬಗ್ಗೆ ಡೀವೀಜಿಯವರು ಹೇಳಿಕೊಂಡಿದ್ದಾರೆ.

ಕೆಳಗಿನೆರಡು ಚೌಪದಿಗಳನ್ನು ಗಮನಿಸಿ:

1.
ಕವಿಯಲ್ಲ ವಿಜ್ಞಾನಿಯಲ್ಲ ಬರಿ ತಾರಾಡಿ
ಅವನರಿಗೆಟುಕುವವೊಲೊoದಾತ್ಮನಯವ
ಹವಣಿಸಿದನಿದನು ಪಾಮರ ಜನರ ಮಾತಿನಲಿ
ಕವನ ನೆನಪಿಗೆ ಸುಲಭ - ಮಂಕುತಿಮ್ಮ

2.
ಮುದಿಕುರುಡಿ ಹೊಂಗೆಯನು "ಬಾದಾಮಿಕೋ"ಯೆನುತ
ಪದುಳದಿಂ ಮೊಮ್ಮಗಂಗೆ ಕೊಡಲು ಸಿಹಿಯಹುದೆ
ಹೃದಯವೊಳಿತಾದೊಡೇo? ತಿಳಿವಿಹುದೆ? ಜಾಣಿವಿಹುದೆ?
ಸುಧೆ ಬಂತೆ ಸುಲಭದಲಿ - ಮಂಕುತಿಮ್ಮ


ಪುರಂದರ ದಾಸರ ರಚನೆಗಳು ಸುಮಾರು ಐದು ಲಕ್ಷಗಳಿದ್ದು ಅದರಲ್ಲಿ ಒಂದು ಸಾವಿರ ಮಾತ್ರ ಲಭ್ಯವಿದೆ ಎಂದು ಹೇಳುವ ಮಾಹಿತಿಯ ಬಗ್ಗೆ ಖಚಿತತೆ ಇಲ್ಲ. ಅದೇನೆ ಇರಲಿ, ನಾನು ಹೇಳ ಹೊರಟಿರುವುದು ಈ ಕೆಳಗಿನ ಹಾಡುಗಳ ಬಗ್ಗೆ, ಸ್ವತಃ ಪುರಂದರ ವಿಠಲನೇ ತಲೆ ಕೆರೆದುಕೊಂಡರೂ ಸ್ವಾರಸ್ಯ ಬಿಟ್ಟುಕೊಡದ ಸಾಹಿತ್ಯವಿದು.

ಮುಳ್ಳು ಕೊನೆಯ ಮೇಲೆ ಮೂರು ಕೆರೆಯ ಕಟ್ಟಿ
ಎರಡು ಬರಿದು ಒಂದು ತುಂಬಲೆ ಇಲ್ಲ

ತುಂಬಲಿಲ್ಲದ ಕೆರೆಗೆ ಬಂದರು ಮೂವರು ಒಡ್ಡರು
ಇಬ್ಬರು ಕುoಟರು ಒಬ್ಬಗೆ ಕಾಲೇ ಇಲ್ಲ

ಕಾಲಿಲ್ಲದ ಒಡ್ಡರಿಗೆ ಕೊಟ್ಟರು ಮೂರು ಎಮ್ಮೆಗೆಳ
ಎರಡು ಬರಡು ಒಂದಕ್ಕೆ ಕರುವೇ ಇಲ್ಲ

ಕರುವಿಲ್ಲದ ಎಮ್ಮೆಗೆ ಕೊಟ್ಟರು ಮೂರು ಹೊನ್ನುಗಳ
ಎರಡು ಸವಕಲು ಒಂದು ಸಲ್ಲಲೇ ಇಲ್ಲ

ಸಲ್ಲದಿದ್ದ ಹೊನ್ನಿಗೆ ಬಂದರು ಮೂವರು ನೋಟಕರು
ಇಬ್ಬರು ಕುರುಡರು ಒಬ್ಬಗೆ ಕಣ್ಣೇ ಇಲ್ಲ

ಕಣ್ಣಿಲ್ಲದ ನೋಟಕರಿಗೆ ಕೊಟ್ಟರು ಮೂರು ಊರುಗಳ
ಎರಡು ಹಾಳು ಊರು ಒಂದಕ್ಕೆ ಒಕ್ಕಲೆ ಇಲ್ಲ

ಒಕ್ಕಲಿಲ್ಲದ ಊರಿಗೆ ಬಂದರು ಮೂವರು ಕುಂಬಾರರು
ಇಬ್ಬರು ಚೊಂಚರು ಒಬ್ಬಗೆ ಕೈಯೇ ಇಲ್ಲ

ಕೈಯಿಲ್ಲದ ಮಡಕೆಗೆ ಹಾಕಿದರ್ಮೂರಕ್ಕಿ ಕಾಳು
ಎರಡು ಹೆನ್ಜಕ್ಕಿ ಒಂದು ಬೇಯಲೇ ಇಲ್ಲ

ಬೇಯಲಿಲ್ಲದ ಅಕ್ಕಿಗೆ ಬಂದರು ಮೂವರು ನೆಂಟರು
ಇಬ್ಬರು ಉಣ್ಣರು ಒಬ್ಬಗೆ ಹಸಿವೇ ಇಲ್ಲ

ಹಸಿವಿಲ್ಲದ ನೆಂಟರಿಗೆ ಕೊಟ್ಟರು ಮೂರು ಟೊಣಪೆಗಳ
ಎರಡು ಸೋಕವು ಒಂದು ತಾಕಲೇ ಇಲ್ಲ

ಇನ್ನು ಈ ಅರ್ಥಗಳೆಲ್ಲ ಪುರಂದರ ವಿಠಲ ಬಲ್ಲ
ಅನ್ಯರ್ಯಾರು ತಿಳಿದವರಿಲ್ಲ


ವಿಠಲನನ್ನು ಮೀರಿಸಿದ ಅನ್ಯರ್ಯಾರಾದರು ಇದರ ಭಾವಾರ್ಥ ಗೊತ್ತಿದ್ದರೆ ದಯವಿಟ್ಟು ತಿಳಿಸಿ.

ದಾಸರ ಪದಗಳಲ್ಲಿ ದಾರ್ಶನಿಕ, ತತ್ವ, ಸಮಾಜದ ಅಂಕು-ಡೊಂಕು ಮತ್ತು ಭಕ್ತಿ ರಸಗಳು ಪ್ರಧಾನವಾಗಿರುತ್ತವೆ. ಆದರೆ ಈ ಕೆಳಗಿನ ರಚನೆ ವಿಚಿತ್ರವಾಗಿದ್ದು ಸುಮ್ಮನೆ ಕೇಳಿಕೊಂಡು ಹೋಗಲು ಬಿಡದೆ ಇದರ ಒಳ ಅರ್ಥ ಕಂಡುಹಿಡಿಯಲು ಕೇಳುಗನ ಬುದ್ಧಿಗೆ ಕಸರತ್ತು ಕೊಡುತ್ತದೆ. ಆದರೆ ಇದರ ದ್ವಂದ್ವಾರ್ಥ ತಿಳಿದವರೆಷ್ಟು ಮಂದಿಯೊ ಗೊತ್ತಿಲ್ಲ. ತಿಳಿದವರು ನಮಗೂ ತಿಳಿಸಿ.

ಏನಾದರೂ ಒಂದಾಗಲಿ
ನೂರೆಂಟು ದೇವರು ಮೊರ ತುಂಬಾ ಕಲ್ಲೆ

ಮನೆಯ ಗಂಡ ಮಾಯಾವಾಗಲಿ
ಉಣಬoದ ಮೈದುನ ಒರಗಲಿ

ಘನ ಅತ್ತಿಗೆ ನಾದಿನಿ ಸಾಯಲಿ
ನೆರೆಮನೆ ಹಾಳಾಗಿ ಹೋಗೆಲೊ ಹರಿಯೆ

ಅತ್ತೆಯ ಕಣ್ಣೆರೆಡು ಇಂಗಲಿ
ಮಾವನ ಕಾಲೆರೆಡು ಮುರಿಯಲಿ
ಹಿತ್ತಲ ಗೋಡೆಯು ಬೀಳಲಿ
ಕಾಡಕತ್ತಲೆಯಾದರೂ ಕವಿಯಲೋ ಹರಿಯೆ

ಕಂದನ ಕಣ್ಣೆರೆಡು ಮುಚ್ಚಲಿ
ಚಂದವಾದ ಹಾವು ಕಚ್ಚಲಿ
ದ್ವಂದ್ವಾರ್ಥಗಳೆಲ್ಲ ಬಿಚ್ಚಲಿ
ಪುರಂದರ ವಿಠಲನು ಮೆಚ್ಚಲೊ ಹರಿಯೆ

ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಹುಟ್ಟುಹಾಕಿ ಸಂಗೀತ ಕ್ಷೇತ್ರಕ್ಕೆ ಪುರಂದರ ದಾಸರು ಅಮೋಘವಾದ ಕಾಣಿಕೆಯನ್ನಿತ್ತಿದ್ದಾರೆ. ಸಾಮಾನ್ಯವಾಗಿ ಪ್ರತಿಯೊಂದು ರಾಷ್ಟ್ರವು ತನ್ನದೇ ಆದ ಒಂದೊಂದು ಶಾಸ್ತ್ರೀಯ ಸಂಗೀತವನ್ನು ಹೊಂದಿರುತ್ತದೆ. ಆದರೆ ನಮ್ಮ ಭಾರತದಲ್ಲಿ ಮಾತ್ರ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತ ಎಂದು ಎರೆಡೆರೆಡಿರುವುದು ವಿಶೇಷ. ಅದೂ ಕರ್ನಾಟಕದ ಕೊಡುಗೆಯಾಗಿರುವುದು ಹೆಮ್ಮೆಯ ವಿಷಯ. ಆದರೆ ಈಗ "ಕರ್ನಾಟಿಕ್ (Carnatic) ಶಾಸ್ತ್ರೀಯ ಸಂಗೀತ" ಎಂಬ ಕರ್ನಾಟಕ ಶಾಸ್ತ್ರೀಯ ಸಂಗೀತದ ಅಪಭ್ರಂಶ ರೂಪವೇ ಎಲ್ಲರ ಬಾಯಲ್ಲಿ ನುಲಿಯುತ್ತದೆ. ನಾವು ಕನ್ನಡಿಗರು ಕೂಡ ಇದಕ್ಕೆ ಹೊರತಾಗಿಲ್ಲ. ಕೊನೇಪಕ್ಷ ನಾವಾದರು "ಕರ್ನಾಟಕ ಶಾಸ್ತ್ರೀಯ ಸಂಗೀತ" ಎಂದು ಬಾಯ್ತುಂಬ ಕರೆದು ನಮ್ಮತನವನ್ನು ಮೆರೆಯಬೇಕು. dasarendare purandara dasaru

x-x-x-x-x-x-x-x-x-x-x-x-x-x-x-x-x-x-x-x-x-x




























2 comments:

Anonymous said...

tumbaa channagide!!!

hamsanandi said...

ಬಸವರಾಜರೆ,

ತುಳಸೀವನದ ಮೂಲಕ ನಿಮ್ಮ ’ಮತ್ತೊಂದು ಮುಖ’ವನ್ನು ಪ್ರವೇಶಿಸಿದೆ :) ನಿಮ್ಮ ಈ ಬರಹ ಚೆನ್ನಾಗಿದೆ.

ಮುಳ್ಳುಕೊನೆಯ ಮೇಲೆ ಮೂರು ಕಟ್ಟೆಯ ಕಟ್ಟಿ - ಈ ಪದದ ಅರ್ಥಗಳಿಗೆ ಈ ಎರಡು ಬ್ಲಾಗುಗಳಲ್ಲಿ ನಡೆದಿರುವ ಚರ್ಚೆ ನೋಡಿ:

http://www.sampada.net/blog/hamsanandi/01/05/2007/3857

http://bellurramki18.wordpress.com/2008/02/05/sri-purandara-dasa-trivia/